ಶನಿವಾರ, ನವೆಂಬರ್ 19, 2016

ಅಮೆರಿಕಾದ ಅಸ್ಮಿತೆ, ಐಕ್ಯತೆ ಮತ್ತು ಶತ್ರುಗಳು

1990ರಲ್ಲಿ ಸೊವಿಯೆತ್ ಒಕ್ಕೂಟ ಛಿಧ್ರವಾದಾಗ, ಶೀತಲ ಸಮರ ಅಂತ್ಯವಾಗುವ ಸಂದರ್ಭದಲ್ಲಿ ಸೊವಿಯೆತ್ ಮೂಲದ ರಾಜಕೀಯ ವಿಶ್ಲೇಷಕ ಜಾರ್ಜಿ ಅರ್ಬಟೊವ್ ಅಮೆರಿಕಾವನ್ನು ಉದ್ದೇಶಿಸಿ ಈ ರೀತಿ ಹೇಳುತ್ತಾರೆ, "ನಾವು ನಿಮ್ಮ ವಿರುದ್ಧ ಒಂದು ಭಯಾನಕ ಕೆಲಸ ಮಾಡಲಿದ್ದೇವೆ. ಅದೇನೆಂದರೆ ಇನ್ನು ಮುಂದೆ ನಿಮಗೆ ಶತ್ರುಗಳಿರುವುದಿಲ್ಲ!" ಹೌದು ಶತ್ರುಗಳಿಲ್ಲದೇ ಇರುವುದು ಅಮೆರಿಕಾದ ಪಾಲಿಗೆ ದುಃಸ್ವಪ್ನವೇ ಸರಿ!
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)



ರಾಷ್ಟ್ರ ಮತ್ತು ರಾಷ್ಟ್ರೀಯ ಅಸ್ಮಿತೆಗಳನ್ನು ರೂಪಿಸುವಲ್ಲಿ ಹಲವಾರು ಅಂಶಗಳು ಮುಖ್ಯ ಪಾತ್ರ ವಹಿಸುತ್ತವೆ. ಇತಿಹಾಸ, ಸಂಸ್ಕೃತಿ, ಭೌಗೋಳಿಕ ಅಂಶಗಳು, ಭಾಷೆ ಇನ್ನಿತರ ಅನೇಕ ಅಂಶಗಳು ಸೇರಿ ವಿಭಿನ್ನ ಸಮುದಾಯಗಳನ್ನೆಲ್ಲಾ ಒಂದೆಡೆ ಸೇರಿಸಿ ರಾಷ್ಟ್ರೀಯ ಅಸ್ಮಿತೆಯೊಂದು ಜೀವ ತಲೆಯುತ್ತದೆ. ವಿಪರ್ಯಾಸವೆಂಬಂತೆ ಶತ್ರು ಭಯ ಮತ್ತು ಯುದ್ಧಗಳೂ ರಾಷ್ಟ್ರವೊಂದರ ಅಸ್ಮಿತೆಯನ್ನು ರೂಪಿಸಬಲ್ಲವು. ರಾಷ್ಟ್ರದೊಳಗಿನ ಆಂತರಿಕ ವೈಮನಸ್ಸು ಪ್ರತ್ಯೇಕತಾವಾದಗಳನ್ನು ನಿವಾರಿಸಿಬಿಡುವಲ್ಲೂ ನಿರಂತರ ಶತ್ರು ಕಾಟ ಮತ್ತು ಯುದ್ಧಗಳು ಮಹತ್ತರ ಪಾತ್ರವಹಿಸುತ್ತವೆ! ಎಲ್ಲಾ ರಾಷ್ಟ್ರಗಳ ವಿಚಾರದಲ್ಲೂ ಇದು ನಿಜ. ಆದರೆ ಕೆಲ ದೇಶಗಳಿಗಂತೂ ತಮ್ಮ ಅಸ್ಮಿತೆ ಮತ್ತು ಏಕತೆಯನ್ನೂ ಉಳಿಸಿಕೊಳ್ಳಲು ಪ್ರತಿ ಕಾಲಘಟ್ಟದಲ್ಲೂ ಕೆಲ ವೈರಿಗಳು ಮತ್ತು ಯುದ್ಧಗಳು ಅನಿವಾರ್ಯ. ಸ್ವತಂತ್ರಗೊಂಡ ನಂತರ ಹಲವು ವರ್ಷಗಳನ್ನು 'ದಿವ್ಯ ನಿರ್ಲಿಪ್ತತೆ'ಯನ್ನೇ ವಿದೇಶಾಂಗ ನೀತಿಯನ್ನಾಗಿಸಿಕೊಂಡಿದ್ದ ಅಮೆರಿಕಾದ ಸಂಯುಕ್ತ ಸಂಸ್ಥಾನ ಈ ಮಾತಿಗೆ ಜ್ವಲಂತ ಉದಾಹರಣೆ.

ಅಮೆರಿಕಾ ಚರಿತ್ರೆಯುದ್ದಕ್ಕೂ 'ಸುರಕ್ಷಿತ ಯುಗ' ಮತ್ತು 'ಭಯದ ಯುಗ'ಗಳೆಂಬ ಎರಡು ಪರ್ಯಾಯ ಯುಗಗಳ ಪ್ರಭಾವ ಕಾಣಬಹುದು. ಈ ಎರಡು ಯುಗಗಳು ರಾತ್ರಿ- ಹಗಲುಗಳಂತೆ ಒಂದಾದ ಮೇಲೆ ಇನ್ನೊಂದರಂತೆ ಕಾಲ ಕಾಲಕ್ಕೆ ಅಮೆರಿಕಾದ ಜನರ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಸುರಕ್ಷಿತ ಯುಗದಲ್ಲಿ ಬಾಹ್ಯ ಶತ್ರುಗಳ ಭಯವಿಲ್ಲದೇ ಇರುವುದರಿಂದ ಅಮೆರಿಕನ್ನರು ಆಂತರಿಕ ವಿಷಯಗಳೆಡೆ ಹೆಚ್ಚು ಗಮನ ನೀಡುತ್ತಾರೆ. ಬಾಹ್ಯ ಶತ್ರುಗಳ ಕೊರತೆ ಪ್ರತ್ಯೇಕತಾ ಭಾವನೆಗಳನ್ನು ಬೆಳೆಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಪ್ರಜೆಗಳಿಗೆ ಅಧ್ಯಕ್ಷನಷ್ಟೇ ಅಲ್ಲದೇ ಇನ್ನಿತರ ರಾಷ್ಟ್ರೀಯ ಸಂಸ್ಥೆಗಳ ಮೇಲೆ ಅವಿಶ್ವಾಸ ಮೂಡುತ್ತದೆ. ಮಿಲಿಟರಿ ಹಸ್ತಕ್ಷೇಪಗಳೂ ಜನಾನುರಾಗ ಕಳೆದುಕೊಳ್ಳುತ್ತವೆ. ಇನ್ನೊಂದೆಡೆ ಭಯದ ಯುಗ ಅಮೆರಿಕಾ ಜನತೆಯಲ್ಲಿ ಬಾಹ್ಯ ಶತ್ರುವಿನ ಭಯವನ್ನು ಹುಟ್ಟುಹಾಕುತ್ತದೆಯಷ್ಟೇ ಅಲ್ಲಾ ಇದೇ ಅಭದ್ರತೆಯ ಕಾರಣದಿಂದಾಗಿಯೇ ಜನ ರಾಷ್ಟ್ರೀಯ ಐಕ್ಯತೆಗೆ ಪ್ರಾಮುಖ್ಯತೆ ನೀಡುತ್ತಾರೆ. ಅಧ್ಯಕ್ಷ ಮತ್ತು ರಾಷ್ಟ್ರೀಯ ಸಂಸ್ಥೆಗಳ ಮೇಲೆ ಪೂರ್ಣ ವಿಶ್ವಾಸ ವ್ಯಕ್ತ ಪಡಿಸುತ್ತಾರೆ. ಯುದ್ಧ ಸಂದರ್ಭಗಳಲ್ಲಿ ಅಮೆರಿಕಾದ ಜನತೆ ತಮ್ಮ ಸರಕಾರಗಳಿಗೆ ನೀಡಿದ ಬೆಂಬಲವೇ ಇದಕ್ಕೆ ಸಾಕ್ಷಿ.

ಹದಿನೆಂಟನೇ ಶತಮಾನದ ಕೊನೆಯ ದಶಕಗಳಲ್ಲಿ ಬ್ರಿಟಿಷ್ ನಿಯಂತ್ರಣದಲ್ಲಿದ್ದ ಅಮೆರಿಕನ್ ವಸಾಹತುಗಳು ವಿಭಿನ್ನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನೆದುರಿಸುತ್ತಿದ್ದವು. ತಮ್ಮದೇ ಆದ ಪ್ರತ್ಯೇಕ ಅಸ್ಮಿತೆ ಮತ್ತು ಸಾರ್ವಭೌಮತ್ವವನ್ನು ಪ್ರತಿನಿಧಿಸುತ್ತಿದ್ದ ಎಲ್ಲಾ ವಸಾಹತುಗಳು ಒಗ್ಗಟ್ಟಾಗಿದ್ದು ಬ್ರಿಟನ್ ಎಂಬ ಬಾಹ್ಯ ಶಕ್ತಿಯನ್ನು ಒದ್ದೋಡಿಸಲು! 1776ರ ಅಮೆರಿಕಾದ ಸ್ವಾತಂತ್ರ್ಯದ ಘೋಷಣೆ ಮತ್ತು ಅಮೆರಿಕಾದ ಕ್ರಾಂತಿಗೆ ಅದರದ್ದೇ ಆದ ಇತಿಮಿತಿಗಳಿದ್ದವು. ಬ್ರಿಟನ್ ಸೋಲಿಸಲು ಒಟ್ಟುಗೂಡಿದ್ದ ವಸಾಹತುಗಳು ಒಂದು ಪೂರ್ಣ ಪ್ರಮಾಣದ ಒಕ್ಕೂಟವಾಗಿರಲಿಲ್ಲ ಮತ್ತು ಯುದ್ಧಕ್ಕೆ ಅವಶ್ಯಕವಾದ ಸಂಪತ್ತು ಹಾಗೂ ಸೈನಿಕ ಶಕ್ತಿಯನ್ನು ಒದಗಿಸುವುದರ ಕುರಿತಾಗಿಯೂ ವಸಾಹತುಗಳ ಮಧ್ಯೆ ವಾಗ್ಯುದ್ಧವೇ ನಡೆದಿತ್ತು. ಆದರೆ ಇವೆಲ್ಲವನ್ನೂ ಮೀರಿಸಿ ಅಮೆರಿಕನ್ನರನ್ನು ಒಂದಾಗಿ ಹೋರಾಡುವಂತೆ ಮಾಡಿದ್ದು ಅವರೆದುರಿಗಿದ್ದ ಬಾಹ್ಯ ಶತ್ರು ಬ್ರಿಟನ್! ಹೀಗೆ ಬ್ರಿಟನ್ ಭಯ ಅಮೆರಿಕಾದ ವಸಾಹತುಗಳಲ್ಲಿ ರಾಷ್ಟ್ರೀಯ ಅಸ್ಮಿತೆಯೊಂದರ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟಿತ್ತು. ಸ್ವಾತಂತ್ರ್ಯಾನಂತರದಲ್ಲೂ ಬ್ರಿಟನ್ 1783ರ ಶಾಂತಿ ಒಪ್ಪಂದವನ್ನು ಕಾಲ ಕಸ ಮಾಡಿಕೊಂಡು ಅನಧಿಕೃತವಾಗಿ ತನ್ನ ಮಿಲಿಟರಿ ಪೋಸ್ಟ್ ಗಳನ್ನು ಸ್ಥಾಪಿಸಿತ್ತು. ಮಿಸ್ಸಿಸ್ಸಿಪ್ಪಿಯನ್ನು ಮುಚ್ಚಿದ ಸ್ಪೈನ್ ಅಮೆರಿಕಾದ ಹಡಗುಗಳ ಸಂಚಾರವನ್ನು ನಿರ್ಬಂಧಿಸಿದ್ದಷ್ಟೇ ಅಲ್ಲ ಕಡಲ್ಗಳ್ಳರೂ ಕೂಡ ಅಮೆರಿಕಾ ಪಾಲಿನ ಶತ್ರುಗಳಾಗಿ ಹೊರಹೊಮ್ಮಿದರು. ಈ ಶತ್ರುಗಳನ್ನೆಲ್ಲಾ ನಿಭಾಯಿಸಲು ಬಲಿಷ್ಠ ಕೇಂದ್ರ ಸರಕಾರದ ಅಗತ್ಯತೆಯನ್ನು ಮನಗಂಡ ಅಮೆರಿಕನ್ನರ ಆಶಯ 1787ರಲ್ಲಿ ರಚಿಸಿದ ಅಮೆರಿಕಾದ ಸಂವಿಧಾನದಲ್ಲಿ ಪ್ರತಿಬಿಂಬಿತವಾಯ್ತು. ಭಯದ ಯುಗ ಅಮೆರಿಕನ್ನರನ್ನು ಸಾಧ್ಯವಾದ ಮಟ್ಟಿಗೆ ಅಧಿಕಾರದ ಕೇಂದ್ರೀಕರಣದತ್ತ ಕೊಂಡೊಯ್ದಿತ್ತು!

ಹತ್ತೊಂಬತ್ತನೇ ಶತಮಾನದ ಆರಂಭಿಕ ದಶಕಗಳಲ್ಲಿ ಭಯದ ವಾತಾವರಣ ಮುಗಿದು ಅಮೆರಿಕಾದಲ್ಲಿ ಸುರಕ್ಷಿತ ಯುಗಕ್ಕೆ ದಾರಿ ಮಾಡಿಕೊಟ್ಟಿತ್ತು. ಅಟ್ಲಾಂಟಿಕ್ ಸಾಗರ, ಶಾಂತಸಾಗರಗಳಿಂದ ರಕ್ಷಿಸಲ್ಪಟ್ಟ ಅಮೆರಿಕಾದ ಜನಸಂಖ್ಯೆ ಮತ್ತು ಆರ್ಥಿಕತೆಯೂ ಸದೃಢವಾಗಿ ಬೆಳೆದುದರಿಂದ ವಿಶ್ವದ ಯಾವ ಶಕ್ತಿಯೂ ಅಮೆರಿಕಾವನ್ನು ಮುಟ್ಟಲಾಗದು ಎಂಬ ಅಭಿಪ್ರಾಯ ಸರ್ವೇ ಸಾಮಾನ್ಯವಾಯಿತು. ಇದೇ ಕಾರಣಕ್ಕಾಗಿಯೇ ಅಬ್ರಹಾಂ ಲಿಂಕನ್ 1838ರಲ್ಲಿ ತನ್ನ ಲೀಸಿಯಂ ಭಾಷಣದಲ್ಲಿ ಈ ರೀತಿ ಹೇಳಿದ್ದರು, "ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಎಲ್ಲಾ ಸೈನ್ಯಗಳು ಒಟ್ಟಾಗಿ, ಪ್ರಪಂಚದ ಎಲ್ಲಾ ಸಂಪತ್ತು ಮಿಲಿಟರಿಗೋಸ್ಕರ ವ್ಯಯವಾದರೂ, ನೆಪೋಲಿಯನ್ ಬೊನಾಪಾರ್ಟ್ ನಂಥ ದಕ್ಷ ಸೇನಾಧಿಪತಿಯಾಗಿ ಬಂದು ಸಾವಿರಾರು ವರ್ಷಗಳು ಕಾದಾಡಿದರೂ ಅಮೆರಿಕಾವನ್ನು ಸೋಲಿಸಲಾಗದು.." ಈ ಮಾತುಗಳು ಲಿಂಕನ್ ವಿರಾವೇಶವೋ ಅಥವಾ ಹುಂಬತನವೋ ಎನ್ನುವುದು ಪ್ರತ್ಯೇಕ ಚರ್ಚೆಯೇ ಸರಿ. ಅದರೆ ಇದೇ ಭಾಷಣದಲ್ಲಿ ಲಿಂಕನ್ ಹೇಳಿದ ಇನ್ನೊಂದು ಸಾಲು ಚಿಂತನೆಗೆ ಎಡೆ ಮಾಡಿಕೊಡುತ್ತದೆ ಅದೇನೆಂದರೆ, "ಒಂದು ವೇಳೆ ಅಮೆರಿಕಾ ಸೋತುಹೋಗುತ್ತದೆ ಎಂದಾದಲ್ಲಿ, ಆ ಸೋಲಿನ ಕಾರಣ ಅಮೆರಿಕನ್ನರೇ ಆಗಿರುತ್ತಾರೆ!" ಲಿಂಕನ್ ನುಡಿದ ಈ ಭವಿಷ್ಯ ಮುಂದೆ ಬಾಗಶಃ ನಿಜವಾಗುತ್ತದೆ. ವಿದೇಶಿ ಆಕ್ರಮಣಕಾರರ ಭಯವಿಲ್ಲದೇ ಹೋದುದರಿಂದ ಅಮೆರಿಕಾ ಆಂತರಿಕ ವಿಷಯಗಳಿಗೆ, ಅದರಲ್ಲೂ ಗುಲಾಮಿತನದ ನಿವಾರಣೆಯ ಬಗ್ಗೆ ಎದ್ದ ಹೊಸ ಪ್ರಶ್ನೆಗಳು 1961ರಲ್ಲಿ ಅಮೆರಿಕಾದೊಳಗೊಂದು ಆಂತರಿಕ ನಾಗರಿಕ ಯುದ್ಧಕ್ಕೆ ಕಾರಣವಾದವು. ಈ ಆಂತರಿಕ ಯುದ್ಧ ಪ್ರತ್ಯೇಕತೆಯ ಕೂಗಿಗೂ ಅವಕಾಶ ಮಾಡಿಕೊಟ್ಟಿತ್ತು. ಅಮೆರಿಕಾಕ್ಕೆ ಯಾವುದೇ ಬಾಹ್ಯ ಶತ್ರುಗಳ ಭಯವಿಲ್ಲದ ಕಾರಣಕ್ಕೇ ಈ ಆಂತರಿಕ ಬಿಕ್ಕಟ್ಟು ಉದ್ಭವಿಸಿತ್ತು ಎಂಬುದನ್ನು ಇವತ್ತಿಗೂ ಅಮೆರಿಕಾದ ರಾಜತಂತ್ರ ನಿಪುಣರು ಒಪ್ಪಿಕೊಳ್ಳುತ್ತಾರೆ. ಈ ಆಂತರಿಕ ಯುದ್ಧವನ್ನು ಕೊನೆಗಾಣಿಸಲು ಮತ್ತು ಅಮೆರಿಕನ್ನರ ಒಗ್ಗಟ್ಟನ್ನು ಪುನರ್ಸ್ಥಾಪಿಸಲು ಹೊರಗಿನ ಯಾವುದಾದರೊಂದು ಆಕ್ರಮಣದ ಭಯವನ್ನು ಮೂಡಿಸಲೇಬೇಕಾದ ಅನಿವಾರ್ಯತೆಯಿಂದಾಗಿ ಆಗಿನ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಫ್ರಾನ್ಸ್ ಮತ್ತು ಸ್ಪೈನ್ ಗಳ ಮೇಲೆ ಯುದ್ಧ ಘೋಷಿಸಲು ಸಲಹೆ ನೀಡಿದ್ದರು!
1917ರಲ್ಲಿ ಅಮೆರಿಕಾ ಪ್ರಥಮ ಮಹಾಯುದ್ಧದ ರಣರಂಗ ಪ್ರವೇಶಿಸಿದಾಗ ದಶಕಗಳ ನಂತರ ಮತ್ತೆ ಅಮೆರಿಕಾಕ್ಕೆ ಹೊಸ ಶತ್ರುಗಳು ಸಿಕ್ಕಿದ್ದರು. ಸುರಕ್ಷಿತ ಯುಗದಿಂದ ಭಯದ ಯುಗಕ್ಕೆ ಅಮೆರಿಕಾ ಕಾಲಿಟ್ಟಾಗಿತ್ತು. ಭಯ, ಸಿಟ್ಟು, ಆದರ್ಶಗಳು ಮತ್ತು ಸರಕಾರೀ ಪ್ರಾಯೋಜಿತ ಪ್ರಚಾರದಿಂದಾಗಿ ಇಡೀ ಅಮೆರಿಕಾ ಒಂದಾಗಿತ್ತು! ಇವೆಲ್ಲವನ್ನು ಗಮನಿಸಿಯೇ 'ದ ನೇಶನ್' ಪತ್ರಿಕೆ ಈ ಬದಲಾವಣೆಯನ್ನು 'ಅಮೆರಿಕಾದಲ್ಲಿ ದೇಶಪ್ರೇಮದ ಪುನರ್ಜನ್ಮ' ಎಂದು ವ್ಯಾಖ್ಯಾನಿಸಿತ್ತು. ದ್ವಿತೀಯ ಮಹಾಯುದ್ಧದ ಸಂಧರ್ಭದಲ್ಲೂ ಜರ್ಮನಿ ಮತ್ತು ಜಪಾನ್ ಗಳಂಥ ಶತ್ರುಗಳ ಕೃಪೆಯಿಂದಾಗಿ ಅಮೆರಿಕನ್ನರು ತಮ್ಮ ದೇಶಪ್ರೇಮದ ತೀವೃತೆಯನ್ನು ಕಾಪಾಡಿಕೊಳ್ಳುವಂತಾಯ್ತು. ಅಮೆರಿಕನ್ನರಲ್ಲಿ ಈ ಐಕ್ಯತೆಯ ಭಾವನೆ ಶೀತಲ ಸಮರದ ಕಾಲದಲ್ಲಿಯೂ ಮುಂದುವರಿಯುತ್ತದೆ. ಕಾರಣ ಸೊವಿಯೆತ್ ಒಕ್ಕೂಟದ ಆಕ್ರಮಣದ ಭಯ! ವಿಭಿನ್ನ ವಿಶ್ವಶಕ್ತಿಗಳು ವಿಬಿನ್ನ ಕಾಲಘಟ್ಟದಲ್ಲಿ ಅಮೆರಿಕಾದ ಶತ್ರುಗಳಾಗಿ ಅಮೆರಿಕನ್ನರ ಒಗ್ಗಟ್ಟು ಮತ್ತು ಸಮಗ್ರತೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣವಾಗುತ್ತವೆ. 1990ರಲ್ಲಿ ಸೊವಿಯೆತ್ ಒಕ್ಕೂಟ ಛಿಧ್ರವಾದಾಗ, ಶೀತಲ ಸಮರ ಅಂತ್ಯವಾಗುವ ಸಂದರ್ಭದಲ್ಲಿ ಸೊವಿಯೆತ್ ಮೂಲದ ರಾಜಕೀಯ ವಿಶ್ಲೇಷಕ ಜಾರ್ಜಿ ಅರ್ಬಟೊವ್ ಅಮೆರಿಕಾವನ್ನು ಉದ್ದೇಶಿಸಿ ಈ ರೀತಿ ಹೇಳುತ್ತಾರೆ, "ನಾವು ನಿಮ್ಮ ವಿರುದ್ಧ ಒಂದು ಭಯಾನಕ ಕೆಲಸ ಮಾಡಲಿದ್ದೇವೆ. ಅದೇನೆಂದರೆ ಇನ್ನು ಮುಂದೆ ನಿಮಗೆ ಶತ್ರುಗಳಿರುವುದಿಲ್ಲ!" ಹೌದು ಶತ್ರುಗಳಿಲ್ಲದೇ ಇರುವುದು ಅಮೆರಿಕಾದ ಪಾಲಿಗೆ ದುಃಸ್ವಪ್ನವೇ ಸರಿ!

ಶೀತಲ ಸಮರದ ನಂತರದ ದಿನಗಳು ಅಮೆರಿಕಾ ಪಾಲಿಗೆ ಸುರಕ್ಷಿತ ಯುಗವಾಗಿ ಮಾರ್ಪಟ್ಟಿವೆ. ಕೆಲವೆಡೆ ಭಯೋತ್ಪಾದಕರ ಕಾಟ ಇದ್ದರೂ, ಅವರನ್ನು ಬಲಿಷ್ಠ ಶತ್ರುಗಳಾಗಿದ್ದ ನಾಝಿ ಜರ್ಮನಿ ಅಥವಾ ಸೊವಿಯೆತ್ ಒಕ್ಕೂಟಗಳ ಜೊತೆ ಹೋಲಿಸಲಾಗದು. ಅಫ್ಘಾನಿಸ್ತಾನ ಮತ್ತು ಇರಾಕ್ ಗಳ ಮೇಲೆ ಅಮೆರಿಕಾ ದಾಳಿ ನಡೆಸಿದಾಗಲೂ ಇದರಿಂದಾಗಿ ಅಮೆರಿಕಾದ ಜನರಲ್ಲಿ ಮೂಡಿದ ಐಕ್ಯತಾ ಭಾವ ಅಲ್ಪಸಮಯಕ್ಕಷ್ಟೇ ಸೀಮಿತವಾಯ್ತು. ಹಿಂದೆ ನಡೆದ ಯುದ್ಧಗಳ ಸಂದರ್ಭಗಳಲ್ಲಿ ಅಮೆರಿಕಾಗೆ ದೊರಕಿದ ಸಾರ್ವಜನಿಕ ಬೆಂಬಲ ಇತ್ತೀಚಿನ ಅಮೆರಿಕಾದ ಕಾರ್ಯಾಚರಣೆಗಳಲ್ಲಿ ಕಡಿಮೆಯಾಗುತ್ತಿರುವುದನ್ನು ಗಮನಿಸಬಹುದು. ಸುರಕ್ಷಿತ ಯುಗದಲ್ಲಿರುವ ಅಮೆರಿಕನ್ನರಿಗೆ ಅಧ್ಯಕ್ಷ ಮತ್ತು ಇನ್ನಿತರ ರಾಷ್ಟ್ರೀಯ ಸಂಸ್ಥೆಗಳ ಮೇಲಿನ ನಿಷ್ಟೆ ಕಡಿಮೆಯಾಗುವುದಷ್ಟೇ ಅಲ್ಲದೇ ದೇಶಪ್ರೇಮದ ತೀವೃತೆಯಲ್ಲೂ ಕಡಿಮೆಯಾಗುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ ಅಮೆರಿಕನ್ನರ ಒಗ್ಗಟ್ಟಿಗೆ ಆಂತರಿಕ ಸಮಸ್ಯೆಗಳಿಗಿಂತಲೂ ಬಾಹ್ಯ ಶತ್ರುಗಳೇ ಹೆಚ್ಚಿನ ಪ್ರಭಾವ ಬೀರುತ್ತಾರೆ. ಇದೇ ಕಾರಣಕ್ಕಾಗಿಯೇ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳಲ್ಲೂ ಆಂತರಿಕ ಸಮಸ್ಯೆಗಳಿಗಿಂತಲೂ ಅಂತರಾಷ್ಟ್ರೀಯ ಸಮಸ್ಯೆಗಳೇ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತವೆ. ಯಾರೇ ಅಧ್ಯಕ್ಷರಾದರೂ ಅವರ ಮೊದಲ ಆದ್ಯತೆ ಅಮೆರಿಕಾಕ್ಕೆ ಬಲಿಷ್ಠ ಶತ್ರುವೊಬ್ಬನ ಹುಡುಕಾಟ!

(This article was published in Vishwavani newspaper on 31 October 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ