ಶನಿವಾರ, ನವೆಂಬರ್ 19, 2016

ಟ್ರಂಪ್ ಪುಟಿನ್ ಗೆಳೆತನದ ಸುತ್ತ-ಮುತ್ತ

ಹಲವು ದಶಕಗಳ ಕಾಲ ಅಮೆರಿಕನ್ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹೆನ್ರಿ ಕಿಸಿಂಜರ್ ಹೇಳಿದ ಮಾತು ಹೀಗಿದೆ. "ಅಮೆರಿಕಾ ಪಾಲಿಗೆ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ, ಶಾಶ್ವತವಾಗಿರುವುದು ಅಮೆರಿಕಾದ ಹಿತಾಸಕ್ತಿಗಳಷ್ಟೇ!" ಬಹುಶಃ ಈ ಒಂದು ಸರಳ ವಾಕ್ಯ ಅಮೆರಿಕಾ ಚರಿತ್ರೆಯನ್ನು ಮತ್ತು ವಿದೇಶಾಂಗ ನೀತಿಯನ್ನು ವಿವರಿಸಿದಷ್ಟು ಸ್ಪಷ್ಟವಾಗಿ ಯಾವ ಬೃಹತ್ ಗ್ರಂಥವೂ ವಿವರಿಸಲಾಗದು!
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


"ಬಲಿಷ್ಠನಾದ ಶತ್ರುವಿಗೆ ಶರಣಾಗತನಾಗುವ ಮೂಲಕ, ಧೀರರನ್ನು ಭೇದ ನೀತಿಯಿಂದಲೂ, ದುರ್ಬಲರನ್ನು ಉಡುಗೊರೆಗಳಿಂದಲೂ, ಸಮಾನರನ್ನೂ ಪ್ರರಾಕ್ರಮದಿಂದಲೂ ಎದುರಿಸಬೇಕು" ವಿದೇಶಾಂಗ ವ್ಯವಹಾರಗಳ ಬಗ್ಗೆ ವಿವರಿಸುತ್ತಾ ಆಚಾರ್ಯ ಚಾಣಕ್ಯರು ಹೇಳಿದ ಮಾತುಗಳಿವು. ರಾಜ ತನ್ನ ಶತ್ರುಗಳ ಜೊತೆಯಲ್ಲಿ ಮಾತ್ರವಲ್ಲದೇ ಮಿತ್ರರ ಜೊತೆಯಲ್ಲಿ ವ್ಯವಹರಿಸುವಾಗಲೂ ಈ ಚಾಣಕ್ಯ ನೀತಿ ಇಂದಿಗೂ ಪ್ರಸ್ತುತ. ರಾಜಕೀಯ ಚದುರಂಗದಾಟದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಪರಿಸ್ಥಿತಿಯ ಒತ್ತಡಗಳು ಮಿತ್ರರನ್ನು ಶತ್ರುಗಳನ್ನಾಗಿಯೂ ಅಥವಾ ಶತ್ರುಗಳನ್ನು ಮಿತ್ರರನ್ನಾಗಿಯೂ ಕ್ಷಣ ಮಾತ್ರದಲ್ಲಿ ಬದಲಾಯಿಸಿಬಿಡುತ್ತದೆ. ಸಾಂಪ್ರದಾಯಿಕ ಶತ್ರು ರಷ್ಯಾ ಮತ್ತು ಅಮೆರಿಕಾಗಳ ವಿಚಾರದಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಇಂಥದ್ದೊಂದು ಬದಲಾವಣೆಗೆ ನಾಂದಿ ಹಾಡುವಂತಿದೆ.

ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮುಂದಿನ ಅಧ್ಯಕ್ಷರಾಗಿ ಚುನಾಯಿತರಾಗುವುದರೊಂದಿಗೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಜಗತ್ತಿನಾದ್ಯಂತ ಮೂಡಿಸಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಟ್ರಂಪ್ ಚುನಾವಣೆಯಲ್ಲಿ ಜಯಗಳಿಸುತ್ತಿದ್ದಂತೆ ಅಮೆರಿಕಾ ಸೇರಿದಂತೆ ವಿಶ್ವದಾಂದ್ಯಂಥ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು. ವಿಶೇಷವಾಗಿ ರಷ್ಯಾದ ಸಂಸತ್ತಿನಲ್ಲಿದ್ದ ಸಂಸದರೆಲ್ಲರೂ ಚಪ್ಪಾಳೆಗಳೊಂದಿಗೆ ಅತ್ಯುತ್ಸಾಹದಿಂದ ಟ್ರಂಪ್ ಗೆಲುವಿನ ಸುದ್ಧಿಯನ್ನು ಸಂಭ್ರಮಿಸಿದರು! ಹೌದು, ಈ ಬಾರಿ ರಷ್ಯನ್ನರು ಸಾಂಪ್ರದಾಯಿಕ ಶತ್ರು ಎಂದೇ ಬಿಂಬಿತವಾಗಿದ್ದ ಅಮೆರಿಕಾದ ಚುನಾವಣೆಗಳಲ್ಲಿ ಅತಿಯಾದ ಕುತೂಹಲವನ್ನೂ, ಉತ್ಸಾಹವನ್ನೂ ತೋರಿಸಿದ್ದರು. ರಷ್ಯಾದ ಸರಕಾರಿ ಸ್ವಾಮ್ಯದ ಮಾಧ್ಯಮಗಳಲ್ಲೂ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಚರ್ಚೆಯ ವಿಷಯವಾಗಿತ್ತಷ್ಟೇ ಅಲ್ಲದೇ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಆರೋಪಗಳನ್ನು ರಷ್ಯನ್ ಮಾಧ್ಯಮಗಳು ಪದೇ ಪದೇ ಪ್ರಸಾರ ಮಾಡಿದ್ದು ರಷ್ಯಾದಲ್ಲಿಯೂ ಟ್ರಂಪ್ ಪರ ಚುನಾವಣಾ ಪ್ರಚಾರ ಮಾಡಿದಂತಿತ್ತು. ಟ್ರಂಪ್ ಗೆಲುವಿಗೆ ಅಭಿನಂದಿಸಿದ ರಷ್ಯಾ ಅಧ್ಯಕ್ಷ ಪುಟಿನ್, ಟ್ರಂಪ್ ಅಧ್ಯಕ್ಷತೆಯಲ್ಲಿ ಸಿರಿಯಾ ರಾಜಕೀಯ ಪ್ರಕ್ಷುಬ್ಧತೆಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಪುಟಿನ್ ಕಠಿಣ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಟ್ರಂಪ್, ಒಬಾಮರಿಗಿಂತ ಪುಟಿನ್ ಉತ್ತಮ ನಾಯಕ ಎಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಪುಟಿನ್ ಮತ್ತು ಟ್ರಂಪ್ ನಡುವಿನ ಈ ವೈಯಕ್ತಿಕ ಸ್ನೇಹ ಅಮೆರಿಕಾ ಮತ್ತು ರಷ್ಯಾ ಬಾಂಧವ್ಯಗಳಲ್ಲೂ ಗಮನಾರ್ಹ ಬದಲಾವಣೆಗಳಿಗೆ ನಾಂದಿ ಹಾಡಬಲ್ಲುದು. ಪ್ರಮುಖವಾಗಿ ಭಯೋತ್ಪಾದನಾ ನಿಗ್ರಹದಲ್ಲಿ ಈ ಎರಡು ದೈತ್ಯ ರಾಷ್ಟ್ರಗಳ ಸಮನ್ವಯ ಅದ್ಭುತಗಳನ್ನು ಸಾಧಿಸಬಲ್ಲದು.

ಇನ್ನೊಂದೆಡೆ ಟ್ರಂಪ್ ಎದುರಾಗಿ ಚುನಾವಣಾ ಕಣಕ್ಕಿಳಿದಿದ್ದ ಹಿಲರಿ ಕ್ಲಿಂಟನ್, ರಷ್ಯಾದ ದ್ವೇಷಕ್ಕೆ ಪಾತ್ರರಾಗಿದ್ದು ಟ್ರಂಪ್ ರಷ್ಯಾ ಒಲವಿಗೆ ಇನ್ನಷ್ಟು ಬಲ ತುಂಬಿತ್ತು.  ಹಿಲರಿ ಕ್ಲಿಂಟನ್ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ 2009ರಿಂದ 2013ರವರೆಗಿನ ಅವಧಿಯಲ್ಲಿ ರಷ್ಯಾ ಮತ್ತು ಅಮೆರಿಕಾದ  ಸಂಬಂಧಗಳಲ್ಲಿ ಅಗಾಧ ಬಿರುಕು ಮೂಡಿತ್ತು. ತನ್ನ ಪ್ರಚಾರದುದ್ದಕ್ಕೂ ಹಿಲರಿ, ರಷ್ಯಾದ ಅಧ್ಯಕ್ಷ ಪುಟಿನ್ ಅಂತರಾಷ್ಟ್ರೀಯ ವ್ಯವಸ್ಥೆಗೆ ಮಾರಕ ಎಂದು ತೆಗಳಿದ್ದಲ್ಲದೇ ಟ್ರಂಪ್ ರನ್ನು ತನ್ನ ಕೈಗೊಂಬೆಯಾಗಿಟ್ಟುಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಷ್ಯನ್ ಮಾಧ್ಯಮಗಳೂ ಕೂಡ, ಹಿಲರಿ ಮೇಲೆ ಭ್ರಷ್ಟಾಚಾರಿ ಮತ್ತು ಜಾಗತಿಕ ಶಾಂತಿಗೆ ಕುತ್ತು ತರಬಲ್ಲ ರಾಜಕಾರಣಿ ಎಂಬಂತೆ ಬಿಂಬಿಸಿತ್ತು. ಇವಿಷ್ಟೇ ಅಲ್ಲದೇ ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಸಿರಿಯಾ ಅಧ್ಯಕ್ಷ ಬಶರ್-ಅಲ್-ಅಸದ್ ಗೆ ರಷ್ಯಾ ಬೆಂಬಲ ಮತ್ತು ಉಕ್ರೈನ್ ಸಮಸ್ಯೆಯ ಕಾರಣದಿಂದಾಗಿ ಅಮೆರಿಕಾ- ರಷ್ಯಾ ಸಂಬಂಧಗಳು ಅತಿಯಾಗಿ ಹದಗೆಟ್ಟಿದ್ದವು. ಇದೀಗ ಟ್ರಂಪ್ ಅಮೆರಿಕಾ ನಾಯಕತ್ವ ವಹಿಸಿಕೊಳ್ಳುವುದರೊಂದಿಗೆ, ಅಮೆರಿಕಾ ತನ್ನ ಸಾಂಪ್ರದಾಯಿಕ ಶತ್ರು ರಷ್ಯಾ ಜೊತೆ ಸ್ನೇಹ ವೃದ್ಧಿಸಿಕೊಳ್ಳುವುದು ಬಹುತೇಕ ಖಚಿತ. ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೇ ಟ್ರಂಪ್ ರಷ್ಯಾ ಜೊತೆಗೆ ಪ್ರಶ್ನಾರ್ಹ ಸಂಬಂಧಗಳನ್ನಿಟ್ಟುಕೊಂಡಿತ್ತು ಎಂಬ ಆರೋಪಗಳ ಆಧಾರದ ಮೇಲೆ ಎಫ್.ಬಿ.ಐ ಈ ಬಗ್ಗೆ ಪ್ರಾಥಮಿಕ ಹಂತದ ತನಿಖೆ ನಡೆಸಿತ್ತಾದರೂ ಪುರಾವೆಗಳ ಕೊರತೆಯಿಂದಾಗಿ ತನಿಖೆಯನ್ನು ಮೊಟಕುಗೊಳಿಸಲಾಗಿತ್ತು. ಈ ಮಧ್ಯೆ ಡೆಮಾಕ್ರಟಿಕ್ ಪಕ್ಷದ ಮೇಲೆ ರಷ್ಯನ್ನರು ಸೈಬರ್ ದಾಳಿ ನಡೆಸಿದೆ ಮತ್ತು ರಷ್ಯಾದ ಗುಪ್ತಚರ ದಳ ಅಮೆರಿಕಾದಲ್ಲಿ ಟ್ರಂಪ್ ಗೆಲುವಿಗಾಗಿ ರಹಸ್ಯ ಕಾರ್ಯಾಚರಣೆ ನಡೆಸಿದೆ ಎಂಬ ಗುಲ್ಲೆದ್ದಿತ್ತು! ಈ ಊಹೆಗಳ ಸತ್ಯಾಸತ್ಯತೆಗಳೇನೇ ಇದ್ದರೂ ರಷ್ಯಾ ಈ ಬಾರಿ ಅಮೆರಿಕಾದ ಚುನಾವಣಾ ಫಲಿತಾಂಶದಲ್ಲಿ ಅತಿಯಾದ ಉತ್ಸಾಹ ತೋರಿದ್ದು ಮಾತ್ರ ಸುಳ್ಳಲ್ಲ.

ಇಸ್ಲಾಮಿಕ್ ಸ್ಟೇಟ್ ಮತ್ತು ಇತರ ಉಗ್ರ ಸಂಘಟನೆಗಳ ವಿರುದ್ಧದ ಹೋರಾಟದಲ್ಲಿ ನ್ಯಾಟೋ ಸದಸ್ಯ ರಾಷ್ಟ್ರಗಳ ಸಹಕಾರ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನುವುದು ಟ್ರಂಪ್ ಅಸಮಧಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಉಗ್ರರನ್ನು ಮಟ್ಟಹಾಕುವಲ್ಲಿ ರಷ್ಯಾದೊಂದಿಗೆ ಅಮೆರಿಕಾ ಕೈ ಜೋಡಿಸುವುದು ಜಾಣತನ ಎನ್ನುವುದು ಟ್ರಂಪ್ ಅಭಿಪ್ರಾಯ. ಟ್ರಂಪ್ ರಷ್ಯಾ ಬಗ್ಗೆ ಹೊಂದಿರುವ ಮೃದು ಧೋರಣೆ ಮತ್ತು ಭವಿಷ್ಯದಲ್ಲಿ ಅಮೆರಿಕಾ ಮತ್ತು ರಷ್ಯಾಗಳು ಮೈತ್ರಿಕೂಟವನ್ನು ರಚಿಸಿಕೊಳ್ಳುವ ಯೋಚನೆಯೇ ಹಲವರಿಗೆ ದಿಗಿಲು ಹುಟ್ಟಿಸಿದೆ.  ಟ್ರಂಪ್-ಪುಟಿನ್ ಗೆಳೆತನದ ಧನಾತ್ಮಕ ಅಂಶವೆಂದರೆ ಈ ಎರಡು ಬಲಾಡ್ಯ ರಾಷ್ಟ್ರಗಳ ಮೈತ್ರಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ. ಉಗ್ರ ನಿಗ್ರಹದಲ್ಲಿ ಸಮನ್ವಯತೆ ಕಾರ್ಯರೂಪಕ್ಕಿಳಿದರೆ ಭಯೋತ್ಪಾದಕರ ದಮನಕ್ಕೆ ಇನ್ನಷ್ಟು ಬಲ ತುಂಬಿದಂತಾಗುತ್ತದೆ. ಭಯೋತ್ಪಾದಕರಿಗಷ್ಟೇ ಅಲ್ಲ ಬ್ರಿಟನ್ ಪಾಲಿಗೂ ಈ ಹೊಸ ಬದಲಾವಣೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಿರಿಯಾದಲ್ಲಿ ರಷ್ಯಾ ಬೆಂಬಲದಿಂದ ಆಡಳಿತ ನಡೆಸುತ್ತಿರುವ ಅಸದ್ ವಿರುದ್ದ ಹೋರಾಡುತ್ತಿರುವ ದಂಗೆಕೋರರಿಗೆ ಅಮೆರಿಕಾ ಮತ್ತು ಬ್ರಿಟನ್ ನೆರವು ನೀಡುತ್ತಿರುವ ವಿಷಯ ತಿಳಿದೇ ಇದೆ. ಆದರೆ ಟ್ರಂಪ್ ಹೇಳಿರುವಂತೆ, ಅಮೆರಿಕಾ ದಂಗೆಕೋರರಿಗೆ ನೀಡುತ್ತಿರುವ ಬೆಂಬಲ ಹಿಂದೆಗೆದುಕೊಂಡು, ರಷ್ಯಾ ಜೊತೆ ಮೈತ್ರಿ ಸಾಧಿಸಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಮಟ್ಟ ಹಾಕುವ ಆಲೋಚನೆಯಲ್ಲಿರುವುದು ಬ್ರಿಟನ್ ಪಾಲಿಗೆ ದೊಡ್ಡ ಹಿನ್ನಡೆ. ಅಮೆರಿಕಾ ಜೊತೆ ಸೇರಿಕೊಂಡು ಸಿರಿಯಾದಲ್ಲಿರುವ ರಷ್ಯಾ ಪ್ರಭಾವ ಮಟ್ಟಹಾಕಬೇಕು ಎಂದುಕೊಂದಿದ್ದ ಬ್ರಿಟನ್ ಪ್ರಧಾನಿ ಥೆರೆಸಾ ಮೇ, ಟ್ರಂಪ್ ರವರ ರಷ್ಯಾ ಪ್ರೀತಿಯಿಂದ ಬೆಚ್ಚಿಬೀಳುವಂತಾಗಿದೆ. ಅಮೆರಿಕಾ ನೇತೃತ್ವದ ನ್ಯಾಟೊ ಮಿತ್ರಕೂಟ ರಷ್ಯಾ ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿಟ್ಟಿರುವ 3 ಲಕ್ಷಕ್ಕೂ ಹೆಚ್ಚಿನ ಸೈನ್ಯವನ್ನು ಹಿಂಡೆದುಕೊಳ್ಳಬೇಕು ಎಂದು ಟ್ರಂಪ್ ಮುಂದೆ ಬೇಡಿಕೆಯಿಯಿಟ್ಟಿದ್ದು, ಯುರೋಪಿನ ರಾಷ್ಟ್ರಗಳು ಅಭದ್ರತೆ ಮತ್ತು ರಷ್ಯನ್ ಆಕ್ರಮಣದ ಭೀತಿ ಎದುರಿಸುವಂತಾಗಿದೆ.

ಹಲವು ದಶಕಗಳ ಕಾಲ ಅಮೆರಿಕನ್ ವಿದೇಶಾಂಗ ನೀತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹೆನ್ರಿ ಕಿಸಿಂಜರ್ ಹೇಳಿದ ಮಾತು ಹೀಗಿದೆ. "ಅಮೆರಿಕಾ ಪಾಲಿಗೆ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ, ಶಾಶ್ವತವಾಗಿರುವುದು ಅಮೆರಿಕಾದ ಹಿತಾಸಕ್ತಿಗಳಷ್ಟೇ!" ಬಹುಶಃ ಈ ಒಂದು ಸರಳ ವಾಕ್ಯ ಅಮೆರಿಕಾ ಚರಿತ್ರೆಯನ್ನು ಮತ್ತು ವಿದೇಶಾಂಗ ನೀತಿಯನ್ನು ವಿವರಿಸಿದಷ್ಟು ಸ್ಪಷ್ಟವಾಗಿ ಯಾವ ಬೃಹತ್ ಗ್ರಂಥವೂ ವಿವರಿಸಲಾಗದು! ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ಪ್ರತಿಯೊಂದು ರಾಷ್ಟ್ರದ ಆದ್ಯ ಕರ್ತವ್ಯವೇ ಆಗಿದ್ದರೂ, ಈವರೆಗೆ ಈ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಶ್ರೇಯಸ್ಸು ಅಮೆರಿಕಾಗೆ ಸಲ್ಲುತ್ತದೆ. ಈ ವಿಚಾರದಲ್ಲಿ ಅಮೆರಿಕಾ ಇತರ ರಾಷ್ಟ್ರಗಳಿಗೆ ಮಾದರಿಯೇ ಸರಿ. ಅಧ್ಯಕ್ಷ ಗಾದಿಗೆ ಚುನಾಯಿತರಾಗಿರುವ ಟ್ರಂಪ್ ಕೂಡ ರಷ್ಯಾ ಮೇಲಿನ ದ್ವೇಷವನ್ನು ಬಿಟ್ಟುಕೊಡುತ್ತಿದ್ದಾರೆಯೇ ವಿನಃ ಅಮೆರಿಕಾದ ರಾಷ್ಟ್ರೀಯ ಹಿತಾಸಕ್ತಿಯನ್ನಲ್ಲ! ಇಷ್ಟಕ್ಕೂ ಟ್ರಂಪ್ ವಿದೇಶಾಂಗ ನೀತಿಯ ಕುರಿತಾಗಿ ಸ್ಪಷ್ಟ ಚಿತ್ರಣಕ್ಕಾಗಿ, 20 ಜನವರಿ 2017ರ ವರೆಗೆ ಕಾದುನೋಡಲೇಬೇಕು.

(This article was published in Vishwavani newspaper on 16 November 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ