ಶನಿವಾರ, ನವೆಂಬರ್ 19, 2016

ಟ್ರಂಪ್ ಅಧ್ಯಕ್ಷತೆ : ಉತ್ಪ್ರೇಕ್ಷೆ ಮತ್ತು ವಾಸ್ತವ

ಚುನಾವಣಾ ಪ್ರಚಾರದಲ್ಲಿ ಅದೆಂಥಾ ವಿಭಿನ್ನ ವಿಚಿತ್ರ ನಿಲುವುಗಳನ್ನು ಹೊಂದಿದ್ದರೂ ಅಮೆರಿಕಾದ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಅಮೆರಿಕನ್ ವ್ಯವಸ್ಥೆ ಅಧ್ಯಕ್ಷನನ್ನು ತನ್ನ ದೇಶದ ಅವಶ್ಯಕತೆಗಳಿಗೆ ತಕ್ಕಂತೆ ರೂಪಿಸಿಕೊಳ್ಳುತ್ತದೆ ಎನ್ನುವುದು ಚರಿತ್ರೆ ದೃಢಪಡಿಸಿದ ಸತ್ಯ.
- ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


"ಎಲ್ಲರಲ್ಲೂ ನಂಬಿಕೆಯಿಡುವುದು ಅಪಾಯಕಾರಿ ಆದರೆ ಯಾರೊಬ್ಬನಲ್ಲೂ ನಂಬಿಕೆಯಿಲ್ಲ ಎನ್ನುವುದು ಅತ್ಯಂತ ಅಪಾಯಕಾರಿ" ಅಬ್ರಹಾಂ ಲಿಂಕನ್ ಈ ಮಾತುಗಳು ಅಮೆರಿಕಾದ ಪ್ರಸಕ್ತ ರಾಜಕೀಯ ವಿದ್ಯಮಾನಗಳಿಗೆ ಸೂಕ್ತ ರೀತಿಯಲ್ಲಿ ಅನ್ವಯಿಸುತ್ತದೆ. ಅಮೆರಿಕಾ ಹಿಲರಿ ಕ್ಲಿಂಟನ್ ರವರನ್ನು ಅಲಕ್ಷಿಸಿ ಡೊನಾಲ್ಡ್ ಟ್ರಂಪ್ ಗೆ ಮಣೆ ಹಾಕಿದೆ ಎಂಬ ಸತ್ಯ ಜೀರ್ಣಿಸಿಕೊಳ್ಳಲು ಅಮೆರಿಕನ್ನರೂ ಸೇರಿದಂತೆ ಪ್ರಪಂಚದ ಇನ್ನಿತರ ಮೂಲೆಗಳ ಜನರು ಹರಸಾಹಸ ಪಡುತ್ತಿದ್ದಾರೆ. ಚುನಾವಣಾ  ಪೂರ್ವದಲ್ಲಿ ಟ್ರಂಪ್ ಓರ್ವ ಮಾನಸಿಕ ಅಸ್ವಸ್ಥ ಎಂಬಂತೆ ವಿಶ್ಲೇಷಣೆ ಮಾಡಿದವರು, ಟ್ರಂಪ್ ಅಧ್ಯಕ್ಷ ಗಾದಿಯೇರಿದ ಮೇಲೂ ತಮ್ಮ ಹಳೆಯ ನಂಬಿಕೆಯನ್ನು ಬದಲಿಸಿಕೊಳ್ಳಲಾಗದೆ ಪರದಾಡುವಂತಾಗಿದೆ. ಟ್ರಂಪ್ ಅಧ್ಯಕ್ಷತೆಯ ಅಮೆರಿಕಾದ ಭವಿಷ್ಯ ಹೇಗಿರುತ್ತದೆ ಎಂದು ವಿಶ್ಲೇಷಿಸಲು ಇದು ಸಕಾಲವಲ್ಲವಾದರೂ ಟ್ರಂಪ್, ಅಮೆರಿಕಾದ ಹಿಂದಿನ ಅಧ್ಯಕ್ಷರಿಗಿಂತ ತೀರಾ ವಿಭಿನ್ನವಾಗಿ ವರ್ತಿಸುವುದಿಲ್ಲ. ಅಮೆರಿಕಾ ಮತ್ತು ವಿಶ್ವ ರಾಜಕೀಯದ ಬದಲಾಗುತ್ತಿರುವ ವಾತಾವರಣ ಟ್ರಂಪ್ ಅಧ್ಯಕ್ಷತೆಯ ನಡೆಗಳನ್ನು ನಿರ್ಧರಿಸುವುದರಿಂದ ಟ್ರಂಪ್ ಆಕ್ರಮಣಶೀಲತೆಯ ಬಹುಪಾಲು ಉತ್ಪ್ರೇಕ್ಷೆಗಷ್ಟೇ ಸೀಮಿತವಾಗಲಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಭೇರಿಯೊಂದಿಗೆ, ಚುನಾವಣೆಯುದ್ದಕ್ಕೂ ಟ್ರಂಪ್ ಗೆಲುವು ಅಸಾಧ್ಯ ಎಂಬಂತಿದ್ದ ವಾತಾವರಣ ಅನಿರೀಕ್ಷಿತ ಬದಲಾವಣೆಗಳಿಗೆ ದಾರಿ ಮಾಡಿ ಕೊಟ್ಟಿದೆ. ಚುನಾವಣಾ ಫಲಿತಾಂಶಕ್ಕೂ ಮುನ್ನ ಅಮೆರಿಕಾದ ಜನತೆ, ಮಾಧ್ಯಮಗಳು ಮಾತ್ರವಲ್ಲ ತನ್ನದೇ ಪಕ್ಷದ ಮುಖಂಡರಿಂದಲೂ ತಿರಸ್ಕಾರಕ್ಕೆ ಒಳಗಾದ ವ್ಯಕ್ತಿ ಈ ಡೊನಾಲ್ಡ್ ಟ್ರಂಪ್! ಟ್ರಂಪ್ ವಿರೋಧಿ ಅಲೆಗೆ ಕಾರಣಗಳು ನೂರಾರು. ಚುನಾವಣಾ ಪ್ರಚಾರದ ಅಬ್ಬರದಲ್ಲಿ ಟ್ರಂಪ್ ಅಮೆರಿಕಾದಲ್ಲಿ ಫ್ಯಾಸಿಸಂ ನೆಲೆಯೂರುವಂತೆ ಮಾಡುತ್ತಾರೆ ಎಂಬ ಭೀತಿ ಅಮೆರಿಕನ್ನರಲ್ಲಿತ್ತು. ಶ್ವೇತ ವರ್ಣೀಯರ ಶ್ರೇಷ್ಠತೆಯನ್ನು ಉತ್ಪ್ರೇಕ್ಷಿಸುವ ಜನಾಂಗೀಯವಾದಿ ಎಂಬ ಆರೋಪವೂ ಟ್ರಂಪ್ ಮೇಲಿತ್ತು. ನ್ಯಾಟೋ ಮೈತ್ರಿಕೂಟದ ಬಗ್ಗೆ ಟ್ರಂಪ್ ತೋರಿಸುತ್ತಿದ್ದ ಅಸಡ್ಡೆ ಮತ್ತು ಪುಟಿನ್ ಮೇಲಿನ ಒಲವು ಕೂಡ ಟ್ರಂಪ್ ಬಗ್ಗೆ ಅಮೆರಿಕಾದಲ್ಲಿ ಈ ಮನುಷ್ಯ ಅಧ್ಯಕ್ಷನಾಗಲು ಯೋಗ್ಯನಲ್ಲ ಎಂಬ ಭಾವನೆ ಮೂಡಿಸಿತ್ತು. ಈ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವಂತೆ ಟ್ರಂಪ್ ಅಮೆರಿಕಾದ 45ನೇ ಅಧ್ಯಕ್ಷರಾಗಿದ್ದಾರೆ. ಹಾಗಿದ್ದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ರಂಪ್ ಬಗ್ಗೆ ಇದ್ದ ನಕಾರಾತ್ಮಕ ಅಭಿಪ್ರಾಯಗಳು ಕೇವಲ ಪೂರ್ವಾಗ್ರಹಪೀಡಿತ ಮಾಧ್ಯಮಗಳ ಸೃಷ್ಠಿಯೇ? ಎಂಬ ಪ್ರಶ್ನೆಯ ಜೊತೆಗೆ ಅಧ್ಯಕ್ಷನಾದ ಮೇಲೆ ಟ್ರಂಪ್ ತಾವಾಡಿದ ಮಾತುಗಳನ್ನು ಜಾರಿಗೊಳಿಸುತ್ತಾರೆಯೇ? ಎಂಬ ಪ್ರಶ್ನೆಗಳಿವೆ.

ಟ್ರಂಪ್ ಸಹವರ್ತಿಗಳು ಮತ್ತು ಸಲಹೆಗಾರರ ಪ್ರಕಾರರ ಮಾಧ್ಯಮಗಳು ಟ್ರಂಪ್ ಮಾತುಗಳನ್ನು ತಮಗೆ ಬೇಕಾದಂತೆ ಪೋಣಿಸಿಕೊಂಡು, ವಾಸ್ತವ ವಿಚಾರಗಳನ್ನು ಮರೆಮಾಚಲು ವ್ಯವಸ್ಥಿತ ಸಂಚು ನಡೆಸಿದ್ದಾರೆ. ಉದಾಹರಣೆಗೆ, ಇತರ ದೇಶಗಳಿಂದ ಅಮೆರಿಕಾಕ್ಕೆ ವಲಸೆ ಬಂದವರ ಬಗ್ಗೆ ಕಠಿಣ ನಿಲುವು ತಳೆದಿದ್ದ ಟ್ರಂಪ್ ಮೆಕ್ಸಿಕೋ ಮತ್ತು ಅಮೆರಿಕಾದ ನಡುವೆ ಗೋಡೆಯೊಂದನ್ನು ಕಟ್ಟಬೇಕು ಮತ್ತು ಮೆಕ್ಸಿಕನ್ ವಲಸೆಗಾರರನ್ನು ಅಮೆರಿಕಾದಿಂದ ಗಡಿಪಾರು ಮಾಡಬೇಕು ಎಂದಿದ್ದರು. ಈ ಗೋಡೆ ಕಟ್ಟುವ ಸಂಪೂರ್ಣ ವೆಚ್ಚವನ್ನು ಮೆಕ್ಸಿಕೋ ಭರಿಸಬೇಕು ಎಂಬ ನಿಲುವನ್ನು ತಳೆದಿದ್ದ ಟ್ರಂಪ್ ಚುನಾವಣಾ ಪ್ರಚಾರದ ಅಂತ್ಯದ ವೇಳೆಗೆ ಈ ಬಗ್ಗೆ ಮೃದು ಧೋರಣೆಯನ್ನು ತಳೆದಿದ್ದರು ಎನ್ನುವುದು ಗಮನಾರ್ಹ ಅಂಶ. ಮೆಕ್ಸಿಕೋದಿಂದ ಅಕ್ರಮವಾಗಿ ವಲಸೆ ಬಂದಿರುವ ಡ್ರಗ್ ಮಾರಾಟಗಾರರನ್ನು ಮಾತ್ರ ಅಮೆರಿಕಾದಿಂದ ಹೊರಹಾಕಬೇಕು ಎಂದಿದ್ದರು. ಅದರೆ ಮೊದಲ ಹೇಳಿಕೆಗೆ ಪ್ರಾಶಸ್ತ್ಯ ನೀಡಿದ ಮಾಧ್ಯಮಗಳು ಎರಡನೇ ಹೇಳಿಕೆಯನ್ನು ಸಂಪೂರ್ಣ ಕಡೆಗಣಿಸಿಬಿಟ್ಟರು. ಇದೇ ರೀತಿ ಮುಸ್ಲಿಮರು ಅಮೆರಿಕಾ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದಿದ್ದ ಟ್ರಂಪ್ ಪ್ರಚಾರದ ಅಂತ್ಯದ ವೇಳೆಗೆ ತಮ್ಮ ನಿಲುವುಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಮಾರ್ಚ್ ನಲ್ಲಿ ನಡೆದ ಚರ್ಚೆಯೊಂದರಲ್ಲಿ ಭಯೋತ್ಪಾದನಾ ನಿರ್ಮೂಲನೆಯ ವಿರುದ್ಧ ಮಾತನಾಡುತ್ತಾ, ಭಯೋತ್ಪಾದಕರು ಮತ್ತವರ ಸಂಬಂಧಿಕರನ್ನು ಕೊಲ್ಲುವುದಕ್ಕಾಗಿ ಅಮೆರಿಕನ್ ಸೈನ್ಯ ಅಂತರಾಷ್ಟ್ರೀಯ ಕಾನೂನನ್ನು ಮೀರಲು ಸದಾ ಸಿದ್ಧವಿದೆ ಎಂದಿದ್ದ ಟ್ರಂಪ್ ಮುಂದಿನ ದಿನಗಳಲ್ಲಿ ಅಮೆರಿಕನ್ ಸೈನ್ಯ ಯಾವುದೇ ಕಾನೂನು ಬಾಹಿರ ಕಾರ್ಯಾಚರಣೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದಿದ್ದು ಮಾಧ್ಯಮಗಳಲ್ಲಿ ವರದಿಯಾಗಲಿಲ್ಲ. ನ್ಯಾಟೊ ಬಗೆಗೂ ತಿರಸ್ಕಾರ ವ್ಯಕ್ತ ಪಡಿಸಿದ್ದ ಟ್ರಂಪ್ ಭಯೋತ್ಪಾದನೆ ವಿರೋಧದ ಹೋರಾಟದಲ್ಲಿ ಮತ್ರಿಕೂಟದ ನೆರವಿನ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಉದಾಹರಣೆಗಳಲ್ಲೂ ಮಾಧ್ಯಮಗಳು ಪಕ್ಷಪಾತ ಧೋರಣೆ ಅನುಸರಿಸಿ ಸುದ್ದಿಯ ಒಂದು ಮುಖವನ್ನು ಮಾತ್ರ ವರದಿ ಮಾಡಿದ್ದಾರೆ ಎನ್ನುವುದು ಟ್ರಂಪ್ ಬೆಂಬಲಿಗರ ಆರೋಪ.

ಟ್ರಂಪ್ ವಿದೇಶಾಂಗ ನೀತಿಯ ಸಲಹೆಗಾರರ ಪ್ರೊಫೆಸರ್ ವಾಲಿದ್ ಫಾರೆಸ್, ಸ್ಪಷ್ಟಪಡಿಸಿದಂತೆ ಟ್ರಂಪ್ ವಿದೇಶಾಂಗ ನೀತಿ ಎರಡು ಪ್ರಮುಖ ಅಂಶಗಳ ಮೇಲೆ ನಿರ್ಧರಿತವಾಗಲಿದೆ. ಮೊದಲನೆಯದಾಗಿ ಭಯೋತ್ಪಾದನೆ ಮತ್ತು ವಿಶೇಷವಾಗಿ ಇಸ್ಲಾಮಿಕ್ ಸ್ಟೇಟ್ ನಂಥ ಉಗ್ರ ಸಂಘಟನೆಗಳ ನಿರ್ಮೂಲನೆ. ಎರಡನೆಯದಾಗಿ ಇರಾನ್ ಮತ್ತು ಉತ್ತರ ಕೊರಿಯಾಗಳಿಗೆ ಸಂಬಂಧಿಸಿದಂತೆ ಅಣ್ವಸ್ತ್ರಗಳ ಭೀತಿಯನ್ನು ನಿವಾರಿಸುವುದು. ರಷ್ಯಾ ಮತ್ತು ಚೀನಾಗಳತ್ತ ಸ್ನೇಹದ ಹಸ್ತ ಚಾಚುತ್ತಿರುವುದು, ಟ್ರಂಪ್ ವಿಚಾರಧಾರೆಯಲ್ಲಿ ಮಾಡಿಕೊಂಡ ರಾಜಿಯಲ್ಲ ಬದಲಾಗಿ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕಾಗಿ ಮಾತ್ರ ಎನ್ನುವುದನ್ನೂ ಫಾರೆಸ್ ಸ್ಪಷ್ಟಪಡಿಸಿದ್ದಾರೆ. 'ಫಾಕ್ಸ್ ನ್ಯೂಸ್' ನಲ್ಲಿ ಫಾರೆಸ್ ಲೇಖನವೊಂದರಲ್ಲಿ ವಿವರಿಸಿರುವಂತೆ, ರಷ್ಯಾ ಮತ್ತು ಚೀನಾಗಳಿಗಿಂತಲೂ ಭಯೋತ್ಪಾದನೆ ಪ್ರಮುಖ ಮತ್ತು ತತ್ ಕ್ಷಣದ ಬೆದರಿಕೆಯಾಗಿರುವುದರಿಂದ್ ಮತ್ತು ಭಯೋತ್ಪಾದನಾ ನಿಗ್ರಹದಲ್ಲಿ ಅಮೆರಿಕಾದ ಶತ್ರುಗಳ ನೆರವನ್ನು ಪಡೆದುಕೊಳ್ಳುವ ಉದ್ದೇಶದಿಂದಾಗಿ ಟ್ರಂಪ್ ಈ ಎರಡು ರಾಷ್ಟ್ರಗಳ ಜೊತೆ ಮೃದು ಧೋರಣೆ ವ್ಯಕ್ತಪಡಿಸಿದ್ದಾರೆ. ಇದೇ ಲೇಖನದಲ್ಲಿ ಫಾರೆಸ್, ಚೀನಾವನ್ನು ತಹಬಂದಿಗೆ ತರಲು ಆರ್ಥಿಕ ಅಸ್ತ್ರಗಳನ್ನು ಉಪಯೋಗಿಸಿ ಈ ಮೂಲಕ ಉತ್ತರ ಕೊರಿಯಾದ ಮಹತ್ವಾಕಾಂಕ್ಷೆಯನ್ನೂ ಹತೋಟಿಯಲ್ಲಿಡುವ ಯೋಜನೆಗಳು ಟ್ರಂಪ್ ಬತ್ತಳಿಕೆಯಲ್ಲಿವೆ ಎಂಬ ಸುಳಿವು ನೀಡಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ವಿದೇಶಾಂಗ ನೀತಿಯಲ್ಲಿ ಟ್ರಂಪ್ ಓರ್ವ ವಾಸ್ತವಿಕವಾದಿ ಎನ್ನುವುದು ರುಜುವಾತಾಗುತ್ತದೆ.

ಟ್ರಂಪ್ ನಾಯಕತ್ವ ಈಗಾಗಲೇ ವೇಗ ಪಡೆದುಕೊಂಡಿರುವ ಭಾರತ - ಅಮೆರಿಕಾ ಸಂಬಂಧಗಳ ಮೇಲೂ ಕೆಲ ಪರಿಣಾಮಗಳನ್ನು ಬೀರಲಿದೆ. ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ಚೀನಾ ಆಕ್ರಮಣಕ್ಕೆ ತಡೆ ಹಾಕುವಲ್ಲಿ ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಮತ್ತಿತರ ರಾಷ್ಟ್ರಗಳೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳುವುದರ ಜೊತೆಗೆ ಅಮೆರಿಕಾದ ಯೋಜನೆಗಳಿಗೆ ಭಾರತದ ನೌಕಾಶಕ್ತಿಯ ಅವಶ್ಯಕತೆ ಬಹಳಷ್ಟಿದೆ. ಅಫಘಾನಿಸ್ತಾನದಲ್ಲಿ ಸ್ಥಿರತೆ ಸಾಧಿಸುವಲ್ಲಿಯೂ ಭಾರತದ ಸಹಕಾರ ಪಡೆದುಕೊಳ್ಳುವ ಅನಿವಾರ್ಯತೆ ಅಮೆರಿಕಾಕ್ಕಿದೆ. ಪಾಕಿಸ್ತಾನ ನಮ್ಮ ಮಿತ್ರ ರಾಷ್ಟ್ರವಲ್ಲ ಎಂದಿರುವ ಟ್ರಂಪ್ ತನ್ನ ಅಣ್ವಸ್ತ್ರಗಳನ್ನು ತ್ಯಜಿಸದಿದ್ದಲ್ಲಿ ಪಾಕ್ ಮುಂದಿನ ದಿನಗಳಲ್ಲಿ ಅಮೆರಿಕಾದಿಂದ ನೆರವು ನಿರೀಕ್ಷಿಸುವಂತಿಲ್ಲ ಎಂದಿದ್ದು ಟ್ರಂಪ್ ಅಧ್ಯಕ್ಷತೆಯಲ್ಲಿ ಭಾರತದ ಪಾಲಿಗೆ ಬೃಹತ್ ರಾಜತಾಂತ್ರಿಕ ಯಶಸ್ಸು. ಟ್ರಂಪ್ ಭಯೋತ್ಪಾದನೆಯ ವಿರುದ್ಧ ತಳೆದಿರುವ ಕಠಿಣ ನಿಲುವು ಭಾರತದ ಪಾಲಿಗೆ ಸಮಾಧಾನಕರ ವಿಷಯವೇ ಆಗಿದ್ದರೂ, ಇಸ್ಲಾಮಿಕ್ ಸ್ಟೇಟ್ ಮತ್ತು ತಾಲಿಬಾನ್ ಉಗ್ರರ ಕುರಿತಾಗಿ ಬೆಂಕಿಯುಗುಳುತ್ತಿರುವ ಟ್ರಂಪ್ ಭಾರತವನ್ನು ಕಾಡುತ್ತಿರುವ ಲಷ್ಕರ್-ಎ-ತಯ್ಬಾ ಮತ್ತು ಜೈಶ್-ಎ-ಮಹಮ್ಮದ್ ಬಗ್ಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಬರಾಕ್ ಒಬಾಮ ಆಂತರಿಕ ಆಡಳಿತ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಅನುಸರಿಸಿದ ಹಲವಾರು ಕ್ರಮಗಳ ಬಗ್ಗೆ ಡೊನಾಲ್ಡ್ ಟ್ರಂಪ್ ಗೆ ಅಸಮಾಧಾನಗಳಿವೆ. ತನ್ನ ಭಿನ್ನಾಬಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವಲ್ಲೂ ಟ್ರಂಪ್ ಯಾವುದೇ ಮುಚ್ಚುಮರೆ ಮಾಡಿಲ್ಲ. "ಪ್ರಸಕ್ತ ಪರಿಸ್ಥಿತಿಗಾಗಿ ತನ್ನ ಹಿಂದಿನ ಅಧ್ಯಕ್ಷರನ್ನು ದೂಷಿಸದ ಒಬ್ಬನೇ ಒಬ್ಬ ಅಧ್ಯಕ್ಷನೆಂದರೆ ಅದು ಜಾರ್ಜ್ ವಾಷಿಂಗ್ಟನ್!" ಎಂಬ ಸಾಲು ಸಾಕು ಅಮೆರಿಕಾದ ಅಧ್ಯಕ್ಷರ ಮನಸ್ಥಿತಿ ಅರ್ಥೈಸಿಕೊಳ್ಳಲು. ಚುನಾವಣಾ ಪ್ರಚಾರದಲ್ಲಿ ಅದೆಂಥಾ ವಿಭಿನ್ನ ವಿಚಿತ್ರ ನಿಲುವುಗಳನ್ನು ಹೊಂದಿದ್ದರೂ ಅಮೆರಿಕಾದ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಅಮೆರಿಕನ್ ವ್ಯವಸ್ಥೆ ಅಧ್ಯಕ್ಷನನ್ನು ತನ್ನ ದೇಶದ ಅವಶ್ಯಕತೆಗಳಿಗೆ ತಕ್ಕಂತೆ ರೂಪಿಸಿಕೊಳ್ಳುತ್ತದೆ ಎನ್ನುವುದು ಚರಿತ್ರೆ ದೃಢಪಡಿಸಿದ ಸತ್ಯ. ಹೀಗಾಗಿ ಟ್ರಂಪ್ ಅಧ್ಯಕ್ಷರಾದ ಕೂಡಲೇ ಪ್ರಚಾರದ ಸಂದರ್ಭಗಳಲ್ಲಿ ಮಾಡಿದ ಹೇಳಿಕೆಗಳೆಲ್ಲವನ್ನು ಜಾರಿಗೊಳಿಸುತ್ತಾರೆ ಎಂದಲ್ಲ. ಟ್ರಂಪ್ ಆಡಳಿತ ವೈಖರಿಯನ್ನು ವಿಶ್ಲೇಷಿಸಲು ಇದು ಸರಿಯಾದ ಸಮಯವೂ ಅಲ್ಲ. 20 ಜನವರಿ 2017ರಂದು ಟ್ರಂಪ್ ಅಧಿಕೃತವಾಗಿ ತನ್ನ ನೀತಿಗಳ ಕುರಿತಾಗಿ ಮಾಡಲಿರುವ ಭಾಷಣ ಮುಂದಿನ ನಾಲ್ಕು ವರ್ಷಗಳ ಅಮೆರಿಕಾ ವಿದೇಶಾಂಗ ನೀತಿಗೆ ನೀಲಿ ನಕಾಶೆ ಒದಗಿಸಲಿದೆ.

(This article was published in Hosa Digantha newspaper on 15 November 2016)






      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ