ಶನಿವಾರ, ನವೆಂಬರ್ 19, 2016

ವಿರೋಧದ ನಡುವೆಯೂ ಅಣ್ವಸ್ತ್ರ ಶಕ್ತಿಯಾಗುವುದೇ ಜಪಾನ್?

ಒಂದೆಡೆ ಜಪಾನಿನ ಸಾರ್ವಜನಿಕ ಅಭಿಪ್ರಾಯ ಇನ್ನೊಂದೆಡೆ ಅಮೆರಿಕಾದ ವಿರೋಧದಿಂದಾಗಿ ಜಪಾನ್ ಅಣ್ವಸ್ತ್ರ  ತಂತ್ರಜ್ಞಾನದ ಬಗೆಗಿನ ಮುಕ್ತ ಚರ್ಚೆ ನಿಶಿದ್ಧ ಎಂಬಂತಾಗಿದೆ. ಇವೆಲ್ಲವುಗಳ ಮಧ್ಯೆ ಜಪಾನಿನ ಸರಣಿ ರಾಜತಾಂತ್ರಿಕ ಹೆಜ್ಜೆಗಳನ್ನು ಗಮನಿಸಿದಾಗ ಜಪಾನ್ ಅಣ್ವಸ್ತ್ರ ಶಕ್ತಿಯಾಗುವ ಆಕಾಂಕ್ಷೆಗೆ ಸ್ಪಷ್ಟ ನಕಾಶೆಯೊಂದು ಸಿದ್ಧವಾದಂತಿದೆ.
-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)


ಅತಿಯಾಗುತ್ತಿರುವ ಚೀನಾ ಮತ್ತು ಉತ್ತರ ಕೊರಿಯಾದ ಉದ್ಧಟತನದಿಂದಲೋ ಅಥವಾ ತನ್ನ ವಿವಾದಾತ್ಮಕ ಹೇಳಿಕೆಗಳಿಗೊಂದು ಗರಿ ಸಿಕ್ಕಿಸಿಕೊಳ್ಳುವ ತವಕದಿಂದಲೋ ಅಮೆರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಜಪಾನ್ ಮತ್ತು ದಕ್ಷಿಣ ಕೊರಿಯಾಗಳು ಅಣ್ವಸ್ತ್ರ ರಾಷ್ಟ್ರಗಳಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಈ ಹೇಳಿಕೆ ಮೂಲಕ ಜಪಾನ್ ನಲ್ಲಿ ಅಣ್ವಸ್ತ್ರ ತಂತ್ರಜ್ಞಾನದ ಬಗ್ಗೆ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ವಿಧ್ವಂಸಕ ಅಣ್ವಸ್ತ್ರ ಮೊತ್ತ ಮೊದಲಬಾರಿಗೆ ತನ್ನ ಶಸ್ತ್ರಾಗಾರಕ್ಕೆ ಸೇರಿಸಿಕೊಂಡಿದ್ದು ಅಮೆರಿಕಾ. ಪ್ರಪ್ರಥಮ ಅಣ್ವಸ್ತ್ರಕ್ಕೆ ಜನ್ಮ ನೀಡಿದ್ದು ಅಮೆರಿಕಾದ ರಹಸ್ಯ 'ಮ್ಯಾನ್ ಹಟ್ಟನ್ ಪ್ರಾಜೆಕ್ಟ್'! ಅಮೆರಿಕಾ ಈ ದೈತ್ಯ ಅಸ್ತ್ರವನ್ನು ಮೊದಲ ಬಾರಿ ಉಪಯೋಗಿಸಿದ್ದು ದ್ವಿತೀಯ ಮಹಾಯುದ್ಧದ ಅಂತ್ಯದಲ್ಲಿ. 1945ರ ಆಗಸ್ಟ್ 6ರಂದು ಲಿಟಲ್ ಬಾಯ್ ಹಿರೊಶಿಮಾವನ್ನು, ಆಗಸ್ಟ್ 9 ಕ್ಕೆ ಫ್ಯಾಟ್ ಮ್ಯಾನ್ ನಾಗಸಾಕಿಯನ್ನು ಧ್ವಂಸ ಮಾಡುವುದರೊಂದಿಗೆ ಅಣ್ವಸ್ತ್ರಗಳ ಸಾಮರ್ಥ್ಯದ ಪರೀಕ್ಷೆಯೂ ನಡೆದು ಹೋಗಿತ್ತು! ಈ ದುರಂತಕ್ಕೆ ಮೊದಲ ಹಾಗೂ ಈವರೆಗಿನ ಏಕೈಕ ಆಹುತಿ ಜಪಾನ್! 1945ರವರೆಗೆ ವಿಶ್ವರಾಜಕೀಯದಲ್ಲಿ ಪಾದರಸದಂತಿದ್ದ ಜಪಾನ್, ಯುರೋಪಿನ ರಾಷ್ಟ್ರಗಳಿಗಿಂತ ನಾನೇನೂ ಕಡಿಮೆಯಿಲ್ಲ ಎಂಬಂತೆ ಸಾಮ್ರಾಜ್ಯಶಾಹಿಯೂ ಆಗಿದ್ದ ಜಪಾನ್ ಗೆ ಮಂಕು ಬಡಿದಂತಾಗಿತ್ತು. ಹೊಡೆತ ತಿಂದಿದ್ದು ಜಪಾನ್ ಆಗಿದ್ದರೂ, ನಾಗಸಾಕಿ ಮತ್ತು ಹಿರೊಶಿಮಾ ದುರ್ಘಟನೆಗೆ ವಿಶ್ವವೇ ಬೆಚ್ಚಿಬಿದ್ದಿತ್ತು. ನಂತರದ ದಿನಗಳಲ್ಲಿ ಫೀನಿಕ್ಸ್ ನಂತೆ ಮರುಹುಟ್ಟು ಜಪಾನ್, ಹಳೆಯ ನೋವುಗಳನ್ನೆಲ್ಲಾ ಮರೆಸುವಂತೆ ಎದ್ದು ನಿಂತಿದ್ದು ಈಗ ಇತಿಹಾಸ. ಅಣ್ವಸ್ತ್ರ ದುರಂತದ ಬಳಿಕ ಜಪಾನ್ ಆರ್ಥಿಕವಾಗಿ, ತಾಂತ್ರಿಕವಾಗಿ ಬಹಳಷ್ಟು ಯಶ ಕಂಡಿದ್ದರೂ, ಮಿಲಿಟರಿ ವಿಚಾರದಲ್ಲಿ ಬಹಳ ಎಚ್ಚರಿಕೆಯ ನೀತಿಯನ್ನು ಅನುಸರಿಸಿತ್ತು. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಶಿಂಜೋ ಅಬೆ ಪರಿಚಯಿಸಿದ ಕೆಲ ಸುಧಾರಣೆಗಳನ್ನು ಹೊರತು ಪಡಿಸಿದರೆ ಜಪಾನ್ ದಶಕಗಳಿಂದ ತನ್ನ ವಿದೇಶಾಂಗ ನೀತಿಯಲ್ಲಿ ತಾನೇ ಹೇರಿಕೊಂಡ ಇತಿ ಮಿತಿಗಳನ್ನು ಮೀರುವ ಪ್ರಯತ್ನ ಮಾಡಿರಲಿಲ್ಲ.

ಅಣ್ವಸ್ತ್ರ ದಾಳಿಯ ಭಯಾನಕ ಅನುಭವದ ಬಳಿಕ ಜಪಾನ್ ಇಂಥ ಒಂದು ದುರಂತ ಮರುಕಳಿಸದಂತೆ ಪಣ ತೊಟ್ಟಿದೆ. ಜಪಾನ್ ನಲ್ಲಿ ಪ್ರತಿ ವರ್ಷ ಆಗಸ್ಟ್ ೬ರಂದು ಅಣ್ವಸ್ತ್ರ ದಾಳಿಗೆ ಬಲಿಯಾದವರ ಸ್ಮರಣೆ ಮಾಡುತ್ತಾರೆ. ರಾಜಕಾರಣಿಗಳಿಂದ ಹಿಡಿದು ಜನಸಾಮಾನ್ಯರವರೆಗೆ "ಇಂಥ ದುರ್ಘಟನೆ ಮರುಕಳಿಸದಿರಲಿ"ಎಂಬ ಕೂಗು ಕೇಳಿಸುತ್ತದೆ. ಇದೇ ದಿನ ಜಪಾನಿನ ನಾಯಕರು ವಿಶ್ವದಾದ್ಯಂತ ಅಣ್ವಸ್ತ್ರ ನಿಶ್ಯಸ್ತ್ರೀಕರಣಗೊಳಿಸುವ ತಮ್ಮ ಪ್ರತಿಜ್ಞೆಯನ್ನು ವಿಶೇಷವಾಗಿ ನೆನಪಿಸಿಕೊಳ್ಳುತ್ತಾರೆ. ಕಳೆದ ಕೆಲ ವರ್ಷಗಳಿಂದ ಜಪಾನ್ ವಿವಿಧ ದೇಶಗಳ, ಅದರಲ್ಲೂ ಪ್ರಮುಖವಾಗಿ ಅಣ್ವಸ್ತ್ರ ರಾಷ್ಟ್ರಗಳ ನಾಯಕರನ್ನು ನಾಗಸಾಕಿ ಮತ್ತು ಹಿರೊಶಿಮಾಗಳ ಅಣ್ವಸ್ತ್ರ ದಾಳಿಯ ಅವಶೇಷಗಳನ್ನು ವೀಕ್ಷಿಸಲು ಆಮ್ರಂತಿಸುತ್ತಿದ್ದಾರೆ. ಕಳೆದ ಜೂನ್ ನಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಹಿರೊಶಿಮಾಗೆ ಭೇಟಿ ನೀಡಿದ್ದು ಜಪಾನಿನ ರಾಜತಾಂತ್ರಿಕ ಯಶಸ್ಸು. ಅಣ್ವಸ್ತ್ರದ ಭೀಕರತೆಯ ಬಗ್ಗೆ ಇಷ್ಟೊಂದು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು, ಆ ನೋವನ್ನು ಸ್ವತಃ ಅನುಭವಿಸಿದ ಏಕೈಕ ರಾಷ್ಟ್ರ ಜಪಾನ್ ಗೆ ಮಾತ್ರ ಸಾಧ್ಯವೇನೋ?

ಸುಮಾರು ಏಳು ದಶಕಗಳಿಂದ ಜಪಾನಿನ ನಾಗರಿಕ ಸಮುದಾಯ ಅಣ್ವಸ್ತ್ರಗಳನ್ನು ಖಡಾಖಂಡಿತವಾಗಿ ವಿರೋಧಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಜಪಾನ್ ಅಣ್ವಸ್ತ್ರ ಶಕ್ತಿಯಾಗುವ ಬಗ್ಗೆ ಎದ್ದಿರುವ ಚರ್ಚೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಮಾರ್ಚ್ 2011ರಲ್ಲಿ ನಡೆದ ಫುಕುಶಿಮ ಅಣುಕೇಂದ್ರ ದುರಂತ ಜಪಾನೀಯರ ಅಣ್ವಸ್ತ್ರ ಅಲರ್ಜಿಯನ್ನು ಇನ್ನಷ್ಟು ಹೆಚ್ಚಿಸಿತ್ತು. ಅಣ್ವಸ್ತ್ರದ ಕುರಿತಾದ ಜಪಾನೀಯರ ಈ ಸಾರ್ವಜನಿಕ ಅಭಿಪ್ರಾಯ ಚುನಾವಣೆಗಳಲ್ಲೂ ಪ್ರತಿಫಲಿತವಾಗುತ್ತಿರುವುದು ಆಶ್ಚರ್ಯವೇನಲ್ಲ. ದ್ವಿತೀಯ ಯುದ್ಧದ ಅಂತ್ಯದಿಂದ ಇವತ್ತಿನವರೆಗೆ ಜಪಾನ್ ಅಮೆರಿಕಾದ ಅಣ್ವಸ್ತ್ರ ರಕ್ಷಣೆಯಲ್ಲಿದೆ ಮಾತ್ರವಲ್ಲ ತನ್ನದೇ ಅದ ಅಣ್ವಸ್ತ್ರ ಶಕ್ತಿ ಬೆಳೆಸಿಕೊಳ್ಳಲು ಯಾವುದೇ ಗಂಭೀರ ಪ್ರಯತ್ನಗಳನ್ನು ಮಾಡಿಲ್ಲ. ಜಪಾನಿನ ಮೇಲೆ ಅಣ್ವಸ್ತ್ರ ಪ್ರಯೋಗಿಸಿದ ಅಮೆರಿಕಾದ ಅಣ್ವಸ್ತ್ರ ರಕ್ಷಣೆಯ ಮೇಲೆ ಜಪಾನ್ ಭದ್ರತೆ ನಿಂತಿರುವುದು ವಿಪರ್ಯಾಸವೇ ಸರಿ! 

ಅಣ್ವಸ್ತ್ರದ ಕುರಿತಾಗಿ ಜಪಾನೀಯರ ತಿರಸ್ಕಾರದ ಹೊರತಾಗಿಯೂ, ಕೆಲ ಜಪಾನೀ ರಾಜಕೀಯ ನಾಯಕರು ಗುಟ್ಟಾಗಿ ಅಣ್ವಸ್ತ್ರ ತಂತ್ರಜ್ಞಾನದ ಬಗ್ಗೆ ಆಸಕ್ತಿ ತೋರಿಸಿದ್ದರು. 1964ರಲ್ಲಿ ಚೀನಾ ಯಶಸ್ವಿಯಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಅಣ್ವಸ್ತ್ರ ಶಕ್ತಿಯೆನಿಸಿಕೊಂಡಾಗ ಜಪಾನ್ ನಾಯಕರಿಗೆ ಅಣ್ವಸ್ತ್ರ ಹೊಂದುವ ಈ ಅಪೇಕ್ಷೆ ಇನ್ನೂ ಹೆಚ್ಚಾಗಿತ್ತು. 1969ರಲ್ಲಂತೂ ಅಣ್ವಸ್ತ್ರ ನಿರೋಧಕ ಸಾಮರ್ಥ್ಯ ಗಳಿಸಿಕೊಳ್ಳುವ ಕುರಿತಾಗಿ ಜಪಾನ್ ರಹಸ್ಯವಾಗಿ ಪಶ್ಚಿಮ ಜರ್ಮನಿಯ ಜೊತೆ ಮಾತುಕತೆ ನಡೆಸಿತ್ತು! ಆದರೆ ಈ ಮಾತುಕತೆ ಹೆಚ್ಚು ಕಾಲ ಬಾಳದೆ ವಿಫಲವಾಗಿತ್ತು. ಇಂದಿಗೆ ಜಪಾನ್ ಅಣ್ವಸ್ತ್ರ ಶಕ್ತಿಯಾಗಲು ಎಷ್ಟೇ ಹರಸಾಹಸಪಟ್ಟರೂ, ಅಮೆರಿಕಾಗೆ ಜಪಾನ್ ಅಣ್ವಸ್ತ್ರ ಶಕ್ತಿಯಾಗುವುದು ಬೇಕಿಲ್ಲ. ಕಾನ್ ಇಟೊ ಎಂಬ ಸಂಶೋಧಕನ ಪ್ರಕಾರ 1972ರಲ್ಲಿ ಅಮೆರಿಕಾದ ಅಧ್ಯಕ್ಷ ರಿಚರ್ಡ್ ನಿಕ್ಸನ್, ಜಪಾನ್ ಎಂದಿಗೂ ಅಣ್ವಸ್ತ್ರ ನಿರೋಧಕ ಶಕ್ತಿಯಾಗಲು ಅವಕಾಶ ನೀಡುವುದಿಲ್ಲ ಎಂಬ ವಾಗ್ದಾನದೊಂದಿಗೆ ಚೀನಾದ ಬೆಂಬಲ ಗಳಿಸಿಕೊಂಡಿದ್ದರು!

ಒಂದೆಡೆ ಜಪಾನಿನ ಸಾರ್ವಜನಿಕ ಅಭಿಪ್ರಾಯ ಇನ್ನೊಂದೆಡೆ ಅಮೆರಿಕಾದ ವಿರೋಧದಿಂದಾಗಿ ಜಪಾನ್ ಅಣ್ವಸ್ತ್ರ  ತಂತ್ರಜ್ಞಾನದ ಬಗೆಗಿನ ಮುಕ್ತ ಚರ್ಚೆ ನಿಶಿದ್ಧ ಎಂಬಂತಾಗಿದೆ. ಇವೆಲ್ಲವುಗಳ ಮಧ್ಯೆ ಜಪಾನಿನ ಸರಣಿ ರಾಜತಾಂತ್ರಿಕ ಹೆಜ್ಜೆಗಳನ್ನು ಗಮನಿಸಿದಾಗ ಜಪಾನ್ ಅಣ್ವಸ್ತ್ರ ಶಕ್ತಿಯಾಗುವ ಆಕಾಂಕ್ಷೆಗೆ ಸ್ಪಷ್ಟ ನಕಾಶೆಯೊಂದು ಸಿದ್ಧವಾದಂತಿದೆ. ಜಪಾನ್ ಅಣ್ವಸ್ತ್ರ ಶಕ್ತಿಯ ಮುಖ್ಯ ಪ್ರತಿಪಾದಕಿ ಟೊಮೊಮಿ ಇನಾಡರವರನ್ನು ಇದೇ ಆಗಸ್ಟ್ ನಲ್ಲಿ ರಕ್ಷಣಾ ಸಚಿವೆಯನ್ನಾಗಿ ನೇಮಿಸಲಾಗಿದೆ. ಜಪಾನ್ ಪ್ರಧಾನಿಯಾಗುವ ಮುನ್ನವೇ ಶಿಂಜೋ ಅಬೆ ಕೂಡ ಕನಿಷ್ಠ ಅವಶ್ಯಕತೆಯ ಅಣ್ವಸ್ತ್ರಗಳನ್ನು ಹೊಂದಲು ಜಪಾನ್ ಸಂವಿಧಾನದಲ್ಲಿ ಅವಕಾಶಗಳಿವೆ ಎಂದಿದ್ದಾರೆ! ಇದೇ ಹೇಳಿಕೆಯನ್ನು ಅಬೆ ಸರಕಾರ ಅಧಿಕೃತವಾಗಿ ಮತ್ತು ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ದೃಢೀಕರಿಸಿಕೊಂಡಿದೆ! ಇವೆಲ್ಲವುಗಳಿಗಿಂತ ಮಿಗಿಲಾಗಿ ಜಪಾನ್ 48 ಟನ್ ಗಳಷ್ಟು ಪ್ಲುಟೋನಿಯಂ ಸಂಗ್ರಹಿಸಿಟ್ಟುಕೊಂಡಿದೆ. ತಾಂತ್ರಿಕವಾಗಿ ಈಗಾಗಲೇ ಮುಂದುವರಿದಿರುವ ಜಪಾನ್ ಈ ಬೃಹತ್ ಸಂಗ್ರಹವನ್ನು ಉಪಯೋಗಿಸಿಕೊಂಡು ಸಾವಿರಾರು ಅಣ್ವಸ್ತ್ರಗಳನ್ನು ಕೆಲವೇ ತಿಂಗಳುಗಳಲ್ಲಿ ಉತ್ಪಾದಿಬಲ್ಲುದು! ಜಪಾನ್ ಕೂಡಿಟ್ಟುಕೊಂಡಿರುವ ಪ್ಲುಟೋನಿಯಂ ರಾಶಿ ಚೀನಾದ ತಲೆ ಕೆಡಿಸಿದ್ದಷ್ಟೇ ಅಲ್ಲದೇ ಅಮೆರಿಕಾದ ಕಣ್ಣನ್ನೂ ಕೆಂಪಾಗಿಸಿದೆ.

ವಾಸ್ತವಿಕ ಸಿದ್ಧಾಂತದ ಪ್ರಕಾರ ನೋಡುವುದಾದರೆ ಅಣ್ವಸ್ತ್ರ ತಯಾರಿಸುವುದಕ್ಕೂ ಮೊದಲು ಜಪಾನ್ ಅಣ್ವಸ್ತ್ರ ಪ್ರಸರಣ ತಡೆ  ಒಪ್ಪಂದದಿಂದ(ಎನ್ ಪಿ ಟಿ)  ಹೊರಬರಬೇಕಾಗುತ್ತದೆ. ತದನಂತರ ವಿಶ್ವಸಮುದಾಯದಿಂದ ದೂರಾಗಿ ಉತ್ತರ ಕೊರಿಯಾ ಸಾಗಿದ ದಾರಿಯನ್ನೇ ಹಿಡಿಯಬೇಕಾಗುತ್ತದೆ. ಇವಿಷ್ಟೇ ಅಲ್ಲದೆ ಜಪಾನ್ ಅಣ್ವಸ್ತ್ರ ಶಕ್ತಿಯಾಗುವುದರೊಂದಿಗೆ ಪೂರ್ವ ಏಷ್ಯಾದಲ್ಲಿ ಅಣ್ವಸ್ತ್ರ ಪೈಪೋಟಿಯ ಸುನಾಮಿಯೆಬ್ಬಿಸಲಿದೆ. ಜಪಾನ್ ಎದುರಿಸುತ್ತಿರುವ ರೀತಿಯ ಸಾಮಾನ್ಯ ಕಳವಳಗಳನ್ನೇ ಎದುರಿಸುತ್ತಿರುವ ದಕ್ಷಿಣ ಕೊರಿಯಾ ತನ್ನ ರಕ್ಷಣೆಗಾಗಿ ಅಣು ಶಕ್ತಿಯ ಹಿಂದೆ ಬೀಳುವುದರಲ್ಲಿ ಸಂಶಯವಿಲ್ಲ. ಇನ್ನೊಂದೆಡೆ ಚೀನಾ ಮತ್ತು ಉತ್ತರ ಕೊರಿಯಾಗಳು ಜಪಾನ್ ಗೆ ಪ್ರತಿರೋಧವಾಗಿ ತಮ್ಮ ಅಣ್ವಸ್ತ್ರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅಪಾಯವಂತೂ ಇದ್ದೇ ಇದೆ. ಹೀಗಾಗಿ ಪೂರ್ವ ಏಷ್ಯಾ ಅಣ್ವಸ್ತ್ರ ಶಕ್ತಿಗಳ ಹಗ್ಗಜಗ್ಗಾಟಕ್ಕೆ ವೇದಿಕೆಯಾಗಿ ವಿಶ್ವದ ಉಳಿವಿಗೆ ಸಂಚಕಾರವನ್ನೂ ತರಬಹುದು.

ವಿಶ್ವಸಂಸ್ಥೆ ಮತ್ತು ಅಮೆರಿಕಾಗಳು ಜಪಾನೀಯರ ಅಣ್ವಸ್ತ್ರ ಹೊಂದುವ ಮಹತ್ವಾಕಾಂಕ್ಷೆಯನ್ನು ನಿಯಂತ್ರಿಸಲು ಸರ್ವಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಅಮೆರಿಕಾವಂತೂ ಜಪಾನ್ ಗೆ ಈಗಾಗಲೇ ಅಣ್ವಸ್ತ್ರ ರಕ್ಷಣೆ ನೀಡುತ್ತಿದೆಯಾದ್ದರಿಂದ ಸ್ವಂತ ಅಣು ಶಕ್ತಿಯ ಜರೂರತ್ತು ಜಪಾನ್ ಗೇನಿದೆ? ಎನ್ನುವುದು ಅಮೆರಿಕಾದ ವಾದ. ಜಪಾನ್ ಅಣ್ವಸ್ತ್ರ ಹೊಂದಲು ಮೂಲ ಕಾರಣ ಉತ್ತರ ಕೊರಿಯಾ ಬೆದರಿಕೆ. ಚೀನಾ ಮತ್ತು ಉತ್ತರ ಕೊರಿಯಾಗಳ ಆಕ್ರಮಣಕಾರಿ ನೀತಿಗಳು ಜಪಾನೀಯರನ್ನು ತಮ್ಮದೇ ಆದ ಅಣ್ವಸ್ತ್ರ ಶಕ್ತಿ ಹೊಂದಲು ಪ್ರೇರೆಪಿಸುತ್ತಿವೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಪ್ಲುಟೋನಿಯಂ ಸಂಗ್ರಹಿಸಿಟ್ಟುಕೊಂಡಿರುವ ಜಪಾನ್ ಯಾವುದೇ ಕ್ಷಣದಲ್ಲೂ ಅಣ್ವಸ್ತ್ರ ತಯಾರಿಗೆ ತೊಡಗಬಹುದು. ಒಂದು ರೀತಿಯಲ್ಲಿ ಅಣ್ವಸ್ತ್ರ ಸಂಬಂಧಿತವಾಗಿ ಉತ್ತರ ಕೊರಿಯಾಕ್ಕೆ ಚೀನಾ ನೀಡುತ್ತಿರುವ ಬೆಂಬಲವನ್ನು ಹಿಂಪಡೆದುಕೊಳ್ಳದೇ ಇದ್ದಲ್ಲಿ, ಜಪಾನ್ ಅಣ್ವಸ್ತ್ರ ಯೋಜನೆಗೆ ಇತರೆ ವಿಶ್ವಶಕ್ತಿಗಳು ಬೆಂಬಲ ನೀಡುವ ಮತ್ತು ಈ ಮೂಲಕ ಚೀನಾವನ್ನು ಹಿಮ್ಮೆಟ್ಟಿಸುವ ಸಮರತಂತ್ರವನ್ನು ಅನುಸರಿಸಲೂ ಇದು ಸಕಾಲ.

(This article was published in Vishwavani newspaper on 19 October 2016)







      KEERTHIRAJ (prof.keerthiraj@gmail.com)
      Assistant Professor
International Relations and Political Science
Alliance University, Bangalore. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ