ಶನಿವಾರ, ನವೆಂಬರ್ 19, 2016

ಚೀನಾ ಡ್ರ್ಯಾಗನ್ ಗೆ ಜಪಾನ್ ಸಮುರಾಯಿ ಸವಾಲು

ದಕ್ಷಿಣ ಚೀನಾ ವಿವಾದದಲ್ಲಿ ಜಪಾನ್ ಹಸ್ತಕ್ಷೇಪವನ್ನು ಹೇಗೋ ಸಹಿಸಿಕೊಂಡಿರಬಹುದು ಎಂದುಕೊಂಡಿದ್ದ ಚೀನೀಯರಿಗೆ, ಇತ್ತೀಚೆಗೆ ಭಾರತದೊಂದಿಗೂ ಜಪಾನ್ ಹತ್ತಿರವಾಗುತ್ತಿರುವುದು ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದೆ. ಭಾರತದ ಬೆಳವಣಿಗೆಯನ್ನು ಸಹಿಸದೆ, ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನದಲ್ಲಿರುವ ಚೀನಾಗೆ ಬಲವಾದ ರಾಜತಾಂತ್ರಿಕ ಹೊಡೆತ ನೀಡುವ ಭಾರತದ ಯೋಜನೆಗಳಿಗೂ ಬಲ ಬಂದಂತಾಗಿದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


ಶೀತಲ ಸಮರದ ಅನೂಹ್ಯ ತಿರುವೊಂದರಲ್ಲಿ ಅಮೆರಿಕಾ ಏಷ್ಯಾದಲ್ಲಿ ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ದೈತ್ಯ ಶಕ್ತಿ ಚೀನಾ ಜೊತೆಗೆ ಬಾಂಧವ್ಯ ಬೆಳೆಸಿಕೊಂಡಿತ್ತು. ಆವತ್ತಿನ ಸಂದರ್ಭದಲ್ಲಿ ಸೊವಿಯೆತ್ ಒಕ್ಕೂಟವನ್ನು ನಿಯಂತ್ರಿಸಲು ಅಮೆರಿಕಾಕ್ಕೆ ಚೀನಾದ ಅವಶ್ಯಕತೆಯೂ ಬಹಳಷ್ಟಿತ್ತು. ಆದರೆ ಕಳೆದೊಂದು ದಶಕದಿಂದ ಜಾಗತಿಕ ರಾಜಕಾರಣದಲ್ಲಾದ ಬದಲಾವಣೆಗಳೊಂದಿಗೆ ಚೀನಾ ಮೇಲಿನ ಅಮೆರಿಕಾ  ಧೋರಣೆಗಳೂ ಬದಲಾಗಿವೆ. ಚೀನಾ ಜೊತೆ ವಿಬಿನ್ನ ಸ್ತರಗಳಲ್ಲಿ ಆರ್ಥಿಕ ಸಂಬಂಧಗಳಿವೆಯಾದರೂ ಅಮೆರಿಕಾ ಇತ್ತೀಚೆಗೆ ಚೀನಾ ಪ್ರಭಾವವನ್ನು ನಿಯಂತ್ರಿಸುವತ್ತ ತನ್ನ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕಾ ಏಷ್ಯಾದ ಕೆಲ ಪ್ರಮುಖ ಶಕ್ತಿಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಒಲವು ಪ್ರದರ್ಶಿಸುತ್ತಿದೆ. ಪಾಕಿಸ್ತಾನದ ವಿಚಾರದಲ್ಲಿ ಪದೇ ಪದೇ ಪರ ವಹಿಸಿಕೊಳ್ಳುತ್ತಿದ್ದ ಅಮೆರಿಕಾ ಇತ್ತಿಚೆಗೆ ಭಾರತದ ಸ್ನೇಹ ಗಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಮೂಲಕ ಭಾರತವನ್ನು ಉಪಯೋಗಿಸಿಕೊಂಡು ಚೀನಾವನ್ನು ಬಗ್ಗುಬಡಿಯುವುದು ಅಮೆರಿಕಾದ ರಣತಂತ್ರ. ಒಂದು ಕಾಲದ ಪರಮ ವೈರಿ ವಿಯೆಟ್ನಾಮ್ ಜೊತೆಗೂ ಅಮೆರಿಕಾ ಸಮರತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್ ಗಳ ಚೀನಾ ವೈರತ್ವವನ್ನೂ ತನ್ನ ಪರವಾಗಿ ಉಪಯೋಗಿಸಿಕೊಳ್ಳುವ ಅವಕಾಶವನ್ನು ಅಮೆರಿಕಾ ಕೈಬಿಟ್ಟಿಲ್ಲ. ಚೀನಾ ಉದ್ಧಟತನಕ್ಕೆ ಪ್ರತ್ಯುತ್ತರವಾಗಿ ಭಾರತ, ಜಪಾನ್, ಅಮೆರಿಕಾ ಮತ್ತು ಆಸ್ಟ್ರೇಲಿಯಾಗಳನ್ನೊಳಗೊಂಡ ವಿಶೇಷ ಮೈತ್ರಿಕೂಟದ ರಚನೆಗೂ ವೇದಿಕೆ ಸಿದ್ಧವಾಗಿದೆ.

ಚೀನಾ ಆಕ್ರಮಣಕಾರಿ ನೀತಿಗೆ ತಿರುಗೇಟು ನೀಡಲು ಇಷ್ಟೆಲ್ಲಾ ಪ್ರಯತ್ನಗಳ ಮಧ್ಯೆ ಜಪಾನ್ ಮಾತ್ರ ಅಮೆರಿಕಾವನ್ನು ಸಂಪೂರ್ಣ ಅವಲಂಬಿಸದೆ ಚೀನಾವನ್ನು ಅಂಕೆಯಲ್ಲಿಡುವುದಕ್ಕೆ ತನ್ನದೇ ಆದ ಸಮರತಂತ್ರ ರೂಪಿಸುತ್ತಿದೆ. ದಕ್ಷಿಣ ಚೀನಾ ಸಮುದ್ರದ ವಿವಾದದ ಕುರಿತಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳು ಚೀನಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದಾಗ ಜಪಾನ್ ಮುಕ್ತವಾಗಿಯೇ ಆಗ್ನೇಯ ಏಷ್ಯಾ ರಾಷ್ಟ್ರಗಳ ಬೆಂಬಲಕ್ಕೆ ನಿಂತಿತ್ತು. 2013ರಲ್ಲೇ ಜಪಾನ್ ಈ ವಿಚಾರವಾಗಿ ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಜೊತೆ ತನ್ನನ್ನು ತಾನು ಗುರುತಿಸಿಕೊಂಡಿದ್ದು, ಆನಂತರದ ವರ್ಷಗಳಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಧೋರಣೆಯನ್ನು ಖಡಾಖಂಡಿತವಾಗಿ ವಿರೋದಿಸುತ್ತಲೇ ಬಂದಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಮುಕ್ತ ಸಂಚಾರದ ಸ್ವಾತಂತ್ರ್ಯವನ್ನು ಕಾಪಾಡಲು ಜಪಾನ್ ನೌಕಾಬಲವೂ ಸಾಗರಕ್ಕಿಳಿದಿರುವುದು ಚೀನಾವನ್ನು ಬೆಚ್ಚಿಬೀಳುವಂತೆ ಮಾಡಿದೆ. ವಿಯೆಟ್ನಾಮ್ ಮತ್ತು ಮಲೇಷಿಯಾಗಳಿಗೆ ಗಸ್ತು ಹಡಗುಗಳನ್ನು ಒದಗಿಸಲು ಜಪಾನ್ ಒಪ್ಪಿಕೊಂಡಿದೆಯಷ್ಟೇ ಅಲ್ಲದೇ ಪಿಲಿಪ್ಪೈನ್ಸ್ ಗೆ ಸಾಗರ ಸಂಬಂಧಿತ ಮಿಲಿಟರಿ ರಕ್ಷಣೆ ಮತ್ತು ಇಂಡೊನೇಷಿಯಾ ಜೊತೆ ರಕ್ಷಣಾ ಒಪ್ಪಂದಗಳಿಗೂ ಸಹಿ ಹಾಕಿದೆ. ಈ ಮೂಲಕ ಚೀನಾವನ್ನು ಮಣ್ಣುಮುಕ್ಕಿಸಲು ಯಾವ ದೇಶದ ಜೊತೆಗೂ ಸಮರತಾಂತ್ರಿಕ ಸಂಧಾನಕ್ಕೂ ಸೈ ಎನ್ನುವ ಮನೋಭಾವ ಪ್ರದರ್ಶಿಸುತ್ತಿದೆ!

ದಕ್ಷಿಣ ಚೀನಾ ವಿವಾದದಲ್ಲಿ ಜಪಾನ್ ಹಸ್ತಕ್ಷೇಪವನ್ನು ಹೇಗೋ ಸಹಿಸಿಕೊಂಡಿರಬಹುದು ಎಂದುಕೊಂಡಿದ್ದ ಚೀನೀಯರಿಗೆ, ಇತ್ತೀಚೆಗೆ ಭಾರತದೊಂದಿಗೂ ಜಪಾನ್ ಹತ್ತಿರವಾಗುತ್ತಿರುವುದು ಸಿಂಹಸ್ವಪ್ನವಾಗಿ ಕಾಡಲಾರಂಭಿಸಿದೆ. ಭಾರತದೊಂದಿಗೆ 1.65 ಬಿಲಿಯನ್ ಡಾಲರ್ ಗಳ ಮಿಲಿಟರಿ ಯುದ್ಧ ವಿಮಾನಗಳ ಒಪ್ಪಂದವೊಂದಕ್ಕಾಗಿ ಜಪಾನ್ ನಲ್ಲಿ ಈಗಾಗಲೇ ಪ್ರಯತ್ನಗಳು ಜಾರಿಯಲ್ಲಿವೆ. ಸಾಗರ ಸಂಬಂಧಿತ ರಕ್ಷಣೆಯ ವಿಚಾರವಾಗಿಯೂ ಹಲವಾರು ಒಪ್ಪಂದಗಳ ಸಾಧ್ಯತೆ ದಟ್ಟವಾಗಿದೆ. ಈ ವಿಷಯಗಳನ್ನು ಗಮನಿಸಿದ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊ. ರಾಜನ್ ಮೆನನ್ ತಮ್ಮ ಸಂಶೋಧನೆಯಲ್ಲಿ ಜಪಾನ್ ಮತ್ತು ಭಾರತದ ಮಧ್ಯೆ ಮಿಲಿಟರಿ ಒಕ್ಕೂಟವೊಂದು ಏರ್ಪಡುವ ಎಲ್ಲಾ ಸಾಧ್ಯತೆಗಳನ್ನು ಗುರುತಿಸುತ್ತಾರೆ. ಏಷ್ಯಾದಲ್ಲಿ ಚೀನಾ ನಡೆಗಳನ್ನು ಗಂಭೀರವಾಗಿ ಪ್ರತಿರೋಧಿಸಲು ಜಪಾನ್ ಗೆ ಬಲವಾದ ಕಾರಣಗಳೂ ಇವೆ. ಡಯಾಯು/ಸೆಂಕಾಕು ದ್ವೀಪಗಳ ಮೇಲೆ ಹಕ್ಕುಸ್ವಾಮ್ಯ ಸಾಧಿಸಲು ಚೀನಾ ಪ್ರಯತ್ನ ಜಪಾನ್ ರಾಜತಾಂತ್ರಿಕ ವಲಯದಲ್ಲಿ ಒತ್ತಡಕ್ಕೆ ಕಾರಣವಾಗಿದೆ. ಈ ಬಾರಿ ಚೀನೀಯರನ್ನು ರಾಜತಾಂತ್ರಿಕವಾಗಿ ಮತ್ತು ಸಮರತಾಂತ್ರಿಕ ರೀತಿಯಲ್ಲೂ ಕಟ್ಟಿಹಾಕುವ ಉತ್ಸಾಹದಲ್ಲಿರುವ ಜಪಾನ್ ಸಹಜವಾಗಿಯೇ ಏಷ್ಯಾದಲ್ಲಿ ಪ್ರಭಾವ ವೃದ್ಧಿಸಿಕೊಳ್ಳುತ್ತಿರುವ ಭಾರತದೊಂದಿಗೆ ಗೆಳೆತನ ಬಯಸುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ನವೆಂಬರ್ ನಲ್ಲಿ ಜಪಾನ್ ಭೇಟಿ ಮಾಡಲಿದ್ದಾರೆ. ತಮ್ಮ ಎರಡು ದಿನಗಳ ಜಪಾನ್ ಭೇಟಿಯಲ್ಲಿ ಜಪಾನಿನ ರಾಜ ಅಕಿಟೊ ಮತ್ತು ಪ್ರಧಾನಿ ಶಿಂಜೊ ಅಬೆ ಜೊತೆ ಮಾತುಕತೆ ನಡೆಸಿ ಹಲವಾರು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ವಿಶೇಷವಾಗಿ ಭಾರತ ಮತ್ತು ಜಪಾನ್ ಗಳು ನಾಗರಿಕ ಅಣು ಒಪ್ಪಂದಕ್ಕೂ ಸಹಿ ಮಾಡಲಿದೆ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪದಕ್ಕೆ ಭಾರತ ಸಹಿ ಹಾಕದ ಕಾರಣ ಹಿಂದೊಮ್ಮೆ ಭಾರತದೊಂದಿಗೆ ನಾಗರಿಕ ಅಣು ಒಪ್ಪಂದಕ್ಕೆ ಹಿಂದೇಟು ಹಾಕಿದ್ದ ಜಪಾನ್ ಇದೀಗ ಭಾರತದ ಬಗ್ಗೆ ತನ್ನ ಮೃದು ನಿಲುವನ್ನು ತಳೆದಿದೆ. ಒಂದು ರೀತಿಯಲ್ಲಿ ಚೀನಾ ಜೊತೆ ಗಡಿವಿವಾದ ಹಂಚಿಕೊಂಡಿರುವ ಮತ್ತು ಚೀನಾದಿಂದ ಸಮಾನ ಬೆದರಿಕೆ ಎದುರಿಸುತ್ತಿರುವ ಎರಡು ರಾಷ್ಟ್ರಗಳೆಂದರೆ ಭಾರತ ಮತ್ತು ಜಪಾನ್. ಶತ್ರುವಿನ ಶತ್ರು ಮಿತ್ರ ಎಂಬ ಚಾಣಕ್ಯವಾಣಿಯಂತೆ ಭಾರತಕ್ಕೆ ಜಪಾನ್ ಅದೇ ರೀತಿ ಜಪಾನ್ ಗೆ ಭಾರತದ ಅವಶ್ಯಕತೆ ಬಹಳಷ್ಟಿದೆ. ತೆರೆಮರೆಯಲ್ಲಿ ಪಾಕಿಸ್ತಾನದ ಎಲ್ಲಾ ಭಾರತ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿ, ಯುದ್ಧ ಸಂದರ್ಭದಲ್ಲೂ ಪಾಕ್ ಬೆನ್ನಿಗೆ ನಿಲ್ಲುವ ಈ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಗಳನ್ನು ಚೀನಾ ಮಾಡುತ್ತಲೇ ಬಂದಿದೆ. ಭಾರತದ ಬೆಳವಣಿಗೆಯನ್ನು ಸಹಿಸದೆ, ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನದಲ್ಲಿರುವ ಚೀನಾಗೆ ಬಲವಾದ ರಾಜತಾಂತ್ರಿಕ ಹೊಡೆತ ನೀಡುವ ಭಾರತದ ಯೋಜನೆಗಳಿಗೂ ಬಲ ಬಂದಂತಾಗಿದೆ. ಚೀನೀ ಡ್ರ್ಯಾಗನ್ ಗೆ ಸಡ್ಡು ಹೊಡೆಯಲು ಹೊಸದಾಗಿ ರೂಪ ಪಡೆಯುತ್ತಿರುವ 'ಕ್ವಾಡ್' ಮಿಲಿಟರಿ ಒಕ್ಕೂಟದಲ್ಲೂ ಭಾರತ ಮತ್ತು ಜಪಾನ್ ಪ್ರಮುಖ ಪಾತ್ರವಹಿಸಲಿವೆ.

ಹಿಂದೊಮ್ಮೆ ಜಪಾನ್ ಆಕ್ರಮಣಗಳು ಮತ್ತು ಮಿಲಿಟರಿ ಸಾಧನೆಗಳು ಚೀನಾದ ನಿದ್ದೆಗೆಡಿಸಿದ್ದವು. ಆದರೆ ದ್ವಿತೀಯ ಮಹಾಯುದ್ಧದ ಅಂತ್ಯ ಜಪಾನ್ ಪಾಲಿಗೆ ದಾರುಣವಾಗಿತ್ತು. 1945ರ ಆಗಸ್ಟ್ 6ರಂದು ಲಿಟಲ್ ಬಾಯ್ ಹಿರೊಶಿಮಾವನ್ನು, ಆಗಸ್ಟ್ 9ಕ್ಕೆ ಫ್ಯಾಟ್ ಮ್ಯಾನ್ ನಾಗಸಾಕಿಯನ್ನು ಧ್ವಂಸ ಮಾಡುವುದರೊಂದಿಗೆ ಏಷ್ಯಾದ ಸಿಡಿಲಮರಿಯಂತಿದ್ದ ಜಪಾನ್ ಗೆ ಮಂಕು ಬಡಿದಂತಾಗಿತ್ತು. ಈ ಘಟನೆಯ ಬಳಿಕ ಇತಿಹಾಸದ ಸಂಕೋಲೆಗಳಲ್ಲಿ ಬಂಧಿಯಾಗಿದ್ಧ ಜಪಾನಿನ ವಿದೇಶಾಂಗ ನೀತಿ ಇದೀಗ ಮತ್ತೆ ತನ್ನ ಗತವೈಭವವನ್ನು ನೆನಪಿಸಿಕೊಳ್ಳುತ್ತಿದೆ. ಭಾರತದ ಪ್ರಧಾನಿ ಮೋದಿ ಮತ್ತು ಜಪಾನಿನ ಅಬೆಯವರ ವಿಚಾರಧಾರೆಗಳಲ್ಲಿರುವ ಸಾಮ್ಯತೆಗಳು ಮತ್ತು ಈ ಇಬ್ಬರೂ ನಾಯಕರೂ ಆಕ್ರಮಣಕಾರಿ ಚೀನಾ ಬಗ್ಗೆ ಹೊಂದಿರುವ ಪ್ರಾಮಾಣಿಕ ಕಾಳಜಿಗಳು ಭವಿಷ್ಯದ ಏಷ್ಯಾ ಶಕ್ತಿ ರಾಜಕೀಯದಲ್ಲಿ ಹೊಸ ಕ್ರಾಂತಿಯ ನಿರೀಕ್ಷೆ ಮೂಡಿಸಿವೆ. 

(This article was published in Hosa Digantha newspaper on 2 November 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ