ಗುರುವಾರ, ನವೆಂಬರ್ 24, 2016

ಸನ್ ತ್ಸು ಯುದ್ಧ ಕಲೆ ನೆನಪಿಸಿದ ಚೀನಾ ಸಮರ ತಂತ್ರ

"ನಿಮ್ಮ ತಂತ್ರಗಳು ಅಭೇಧ್ಯವಾದ ಕಗ್ಗತ್ತಲಿನಂತಿರಲಿ ಮತ್ತು ನಿಮ್ಮ ಕಾರ್ಯ ಸಿಡಿಲಿನಂತಿರಲಿ" ಎಂದವನು ಸಾರ್ವಕಾಲಿಕ ಮಿಲಿಟರಿ ತಂತ್ರಜ್ಞ ಮತ್ತು ಸಮರತಾಂತ್ರಿಕ ನಿಪುಣ ಸನ್ ತ್ಸು. ಸರಿ ಸುಮಾರು ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ಚೀನಾದಲ್ಲಿ ಜೀವಿಸಿದ್ದ ಎನ್ನಲಾದ ಈ ಶ್ರೇಷ್ಠ ತತ್ವಜ್ಞಾನಿಯ ವಿಚಾರಗಳನ್ನು ಇವತ್ತಿಗೂ ಪ್ರಸ್ತುತ ಎನ್ನಲಾಗುತ್ತದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)


"ನಿಮ್ಮ ತಂತ್ರಗಳು ಅಭೇಧ್ಯವಾದ ಕಗ್ಗತ್ತಲಿನಂತಿರಲಿ ಮತ್ತು ನಿಮ್ಮ ಕಾರ್ಯ ಸಿಡಿಲಿನಂತಿರಲಿ" ಎಂದವನು ಸಾರ್ವಕಾಲಿಕ ಮಿಲಿಟರಿ ತಂತ್ರಜ್ಞ ಮತ್ತು ಸಮರತಾಂತ್ರಿಕ ನಿಪುಣ ಸನ್ ತ್ಸು. ಸರಿ ಸುಮಾರು ಕ್ರಿಸ್ತ ಪೂರ್ವ ಆರನೇ ಶತಮಾನದಲ್ಲಿ ಚೀನಾದಲ್ಲಿ ಜೀವಿಸಿದ್ದ ಎನ್ನಲಾದ ಈ ಶ್ರೇಷ್ಠ ತತ್ವಜ್ಞಾನಿಯ ವಿಚಾರಗಳನ್ನು ಇವತ್ತಿಗೂ ಪ್ರಸ್ತುತ ಎನ್ನಲಾಗುತ್ತದೆ. ಯುದ್ಧ ತಂತ್ರಗಳಿಗೆ ಸಂಬಂಧಿಸಿದಂತೆ ಸನ್ ತ್ಸು ಬರೆದ ಅತ್ಯಂತ ಪ್ರಭಾವಶಾಲಿ ಪುಸ್ತಕವೇ 'ದ ಆರ್ಟ್ ಆಫ್ ವಾರ್'! ಪೂರ್ವ ಏಷ್ಯಾಕ್ಕೆ ಸೀಮಿತವಾಗಿದ್ದ ಈ ಪುಸ್ತಕದ ಪ್ರಭಾವ ಇಪ್ಪತ್ತನೇ ಶತಮಾನದಲ್ಲಿ ವಿಶ್ವದಾದ್ಯಂತ ಹರಡಿ ಶ್ರೇಷ್ಠ ಮಿಲಿಟರಿ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಕ್ರೀಡಾಪಟುಗಳ ಯಶಸ್ಸಿನ ಹಿಂದೆ ಮಹತ್ತರ ಪಾತ್ರ ವಹಿಸಿತ್ತು. ಇದೀಗ ವಿಶ್ವದ ದೊಡ್ಡಣ್ಣನಾಗಲು ಹೊರಟಿರುವ ಚೀನಾ ತನ್ನ ಶತ್ರುಗಳನ್ನು ಬಗ್ಗು ಬಡಿಯಲು ತನ್ನದೇ ನೆಲದ ಈ ಮಿಲಿಟರಿ ತಂತ್ರಜ್ಞನ ತಂತ್ರಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದೆ.

ದೇಶದ ಅವಿಭಾಜ್ಯ ಅಂಗವೊಂದರ ಮೇಲೆ ವಿದೇಶಿ ದಾಳಿಯಾದಾಗ ಅದನ್ನು ಖಂಡಿಸಿ ಅದರ ವಿರುದ್ಧ ಸರಕಾರದ ಜೊತೆ ಕೈ ಜೋಡಿಸುವುದು ದೇಶದ ನಾಗರಿಕನೊಬ್ಬನ ನೈತಿಕ ಜವಾಬ್ದಾರಿ. 'ದ ಆರ್ಟ್ ಆಫ್ ವಾರ್' ಪುಸ್ತಕದ ಮೊದಲ ಅಧ್ಯಾಯದಲ್ಲಿ ಸನ್ ತ್ಸು ನೈತಿಕತೆಯ ಪ್ರಭಾವವನ್ನು ಈ ರೀತಿ ವಿವರಿಸಿದ್ದಾನೆ, " ನೈತಿಕ ಪ್ರಭಾವದಿಂದಾಗಿ ಜನರು ತಮ್ಮ ನಾಯಕರೊಂದಿಗೆ ಸಾಮರಸ್ಯದಿಂದಿರುತ್ತಾರೆ. ಮತ್ತು ಸಾವಿನ ಭಯವೂ ಇಲ್ಲದೆ  ತಮ್ಮ ಜೀವನ ಪರ್ಯಂತ ನಾಯಕರಿಗೆ ಬೆಂಬಲವಾಗಿ ನಿಲ್ಲುತ್ತಾರೆ." ಹೀಗಾಗಿ ಚೀನಿ ನಾಯಕರು ತಮ್ಮ ಪ್ರಜೆಗಳನ್ನು ನೈತಿಕ ಪ್ರಭಾವದಲ್ಲಿಟ್ಟುಕೊಳ್ಳುವ ಪ್ರಯತ್ನಗಳು ಜಾರಿಯಲ್ಲಿಟ್ಟಿದ್ದಾರೆ. ಪ್ರಾಥಮಿಕ ಶಿಕ್ಷಣದಲ್ಲಿಯೇ ಚೀನಾ ವಿದ್ಯಾರ್ಥಿಗಳಿಗೆ ಚೀನಾದ ಭೂಪ್ರದೇಶದ ಬಗ್ಗೆ ತಪ್ಪು ಮಾಹಿತಿಯನ್ನು ತುಂಬಲಾಗುತ್ತದೆ. ಚೀನಾಗೆ ಇತರ ರಾಷ್ಟ್ರಗಳ ಜೊತೆಗಿರುವ ಗಡಿ ತಗಾದೆಗಳ ವಿಚಾರವನ್ನು ಅತೀ ಬುದ್ಧಿವಂತಿಕೆಯಿಂದ ಮುಚ್ಚಿಡಲಾಗುತ್ತಿದೆ. ಈ ರೀತಿ ಚೀನಾ ಹಕ್ಕು ಸಾಧಿಸಿದ ಭೂಪ್ರದೇಶಗಳೆಲ್ಲವೂ ಅಧಿಕೃತವಾಗಿ ಚೀನಾ ಭೂಭಾಗಗಳೇ ಎಂದು ಬಿಂಬಿಸುವ ಪ್ರಯತ್ನ ಚೀನಾದ ಶಾಲಾ ತರಗತಿಗಳಲ್ಲಿ ನಿರ್ವಿಘ್ನವಾಗಿ ಸಾಗುತ್ತಿದೆ. ಸಹಜವಾಗಿಯೇ ಚಿಕ್ಕಂದಿನಲ್ಲಿ ಕಲಿತ ಈ ತಪ್ಪು ಪಾಠಗಳು, ವಯಸ್ಕರಾದಾಗ ಇನ್ನೂ ಗಟ್ಟಿಯಾಗುತ್ತವೆ. 2014ರಲ್ಲಿ ಸಂಸ್ಥೆಯೊಂದು ನಡೆಸಿದ ಸರ್ವೆಯೊಂದರಲ್ಲಿ ತಿಳಿದು ಬಂದ ಅಚ್ಚರಿಯ ವಿಷಯವೇನೆಂದರೆ ಸರ್ವೇಗೆ ಒಳಗಾದ ಪ್ರತಿಯೊಬ್ಬ ಚೀನೀ ವ್ಯಕ್ತಿಯೂ ' ನೈನ್ ಡ್ಯಾಶ್ ರೇಖೆ'ಯ ಒಳಗಿನ ಎಲ್ಲಾ ಭೂಭಾಗಗಳು ಚೀನಾದ ಅಧಿಕೃತ ಭೂಪ್ರದೇಶ ಎಂದು ನಂಬಿದ್ದಾರೆ! ಹೀಗಾಗಿ ದಕ್ಷಿಣ ಚೀನಾ ಸಮುದ್ರದ ಮೇಲೆ ಬೇರೆ ಯಾವುದೇ ದೇಶ ಹಿಡಿತ ಬಲಪಡಿಸಿಕೊಳ್ಳಲು ಪ್ರಯತ್ನಿಸಿದರೆ, ಚೀನಾ ಜನತೆ ತಮ್ಮ ನಾಯಕರ ಯಾವುದೇ ವಿಧ್ವಂಸಕ ನಿರ್ಧಾರವನ್ನು ಕಣ್ಣು ಮುಚ್ಚಿಕೊಂಡು ಒಪ್ಪಿ ಬಿಡುತ್ತಾರೆ. ಇದು ಚೀನಾದ ಕಮ್ಯುನಿಸ್ಟ್ ನಾಯಕರು ಜನತೆಯ ಮೇಲೆ ಹೇರಿರುವ ನೈತಿಕ ಪ್ರಭಾವ!

2016 ಜುಲೈನಲ್ಲಿ ಹೇಗ್ ನ್ಯಾಯಾಧಿಕರಣ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಚೀನಾದ ಆಕ್ರಮಣಕಾರಿ ನಿಲುವಿಗೆ ಛೀಮಾರಿ ಹಾಕಿ, ಈ ಪ್ರದೇಶದಲ್ಲಿ ಚೀನಾ ಹಕ್ಕು ಸಾಧಿಸುವುದು ಕಾನೂನು ಬಾಹಿರ ಎಂಬ ತೀರ್ಪು ನೀಡಿತ್ತು. ಆದರೆ ಈ ತೀರ್ಪು ಅನುಷ್ಠಾನಗೊಳ್ಳುವ ಮುನ್ನವೇ ಸೆಪ್ಟೆಂಬರ್ ನಲ್ಲಿ ಚೀನಾ ಮತ್ತು ರಷ್ಯಾಗಳ ನೌಕಾಪಡೆಗಳು ಜಂಟಿ ಸಮರಾಭ್ಯಾಸ ನಡೆಸುವ ಮೂಲಕ ವಿಶ್ವಕ್ಕೊಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದವು. ಈ ಎರಡು ದೇಶಗಳ ನಡುವಿನ ಶೀತಲ ಸಮರದ ಕಾಲದ ವೈರತ್ವ ಹಂತ ಹಂತವಾಗಿ ಮರೆಯಾಗಿ, ಇದೀಗ ರಷ್ಯಾ ಮತ್ತು ಚೀನಾಗಳು ಪರಸ್ಪರರ ಹಿತಾಸಕ್ತಿಗಳಿಗೆ ಹೆಗಲು ಕೊಡುವ ಕೆಲಸ ಮಾಡುತ್ತಿವೆ. ತನ್ನ ಪುಸ್ತಕದ ಹನ್ನೊಂದನೆ ಅಧ್ಯಾಯದಲ್ಲಿ ಸನ್ ತ್ಸು ಮೈತ್ರಿ ಕೂಟಗಳ ಬಗ್ಗೆ ಈ ರೀತಿ ಬರೆಯುತ್ತಾನೆ, "ನೆರೆಹೊರೆಯ ರಾಜ್ಯಗಳ ಯೋಜನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ನಾವು ಯಾವುದೇ ಮತ್ರಿಕೂಟ ರಚಿಸಬಾರದು" ಚರಿತ್ರೆಯನ್ನು ಗಮನಿಸಿದರೆ ರಷ್ಯಾ ಒಂದು ಸಾರಿ ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆ ಗುರುತಿಸಿಕೊಂಡರೆ ಇನ್ನೊಂದು ಬಾರಿ ಪೂರ್ವದೆಡೆ ವಾಲುತ್ತದೆ. ರಷ್ಯಾದ ಭೂಭಾಗವೂ ಕೂಡ ಅತ್ತ ಪಶ್ಚಿಮವೂ ಅಲ್ಲದ, ಇತ್ತ ಪೂರ್ವಕ್ಕೂ ಸೇರದ ತ್ರಿಶಂಕು ಸ್ವರ್ಗ! ೧೯೯೦ರಲ್ಲಿ ಸೊವಿಯೆತ್ ಪತನದೊಂದಿಗೆ ರಷ್ಯಾ ಪಶ್ಚಿಮದ ರಾಷ್ಟ್ರಗಳ ಬಳಗ ಸೇರಿಕೊಂಡು ಬಿಟ್ಟಿತ್ತು. ಆದರೆ ವ್ಲಾದಿಮಿರ್ ಪುಟಿನ್ ಅಧಿಕಾರಕ್ಕೇರಿದ ಮೇಲೆ ರಷ್ಯಾದ ಪ್ರತಿ ಹೆಜ್ಜೆಯೂ ಪಾಶ್ಚಾತ್ಯ ರಾಷ್ಟ್ರಗಳ ತಲೆನೋವಿಗೆ ಕಾರಣವಾಗಿದೆ. ರಷ್ಯಾದ ಈ ಆಕ್ರಮಣಕಾರಿ ಮನೋಭಾವದ ಹಿಂದೆ ಅಮೆರಿಕಾ ನಿಯಂತ್ರಿತ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಬದಲಿಸುವ ಮಹತ್ವಾಕಾಂಕ್ಷೆಯಿದೆ. ಹೀಗಾಗಿ ಅಮೆರಿಕಾ ನಿರ್ಮಿಸಿ, ನಿಯಂತ್ರಿಸುತ್ತಿರುವ ಈ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ಧ್ವಂಸ ಮಾಡಲು ಸಮಾನಮನಸ್ಕ ದೈತ್ಯ ರಾಷ್ಟ್ರವೊಂದರ ಹುಡುಕಾಟದಲ್ಲಿರುವ ರಷ್ಯಾಗೆ ಸರಿಯಾದ ಸಮಯದಲ್ಲೇ ಕಣ್ಣಿಗೆ ಬಿದ್ದಿದ್ದು ಚೀನೀ ಡ್ರ್ಯಾಗನ್! ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದ ಚೀನಾಗೆ ಸನ್ ತ್ಸು ಪುಸ್ತಕದಲ್ಲಿದ್ದ ಮಾದರಿ ಗೆಳೆಯ ರಷ್ಯಾ ರೂಪದಲ್ಲಿ ದೊರೆತಿತ್ತು. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕಾ ಹಸ್ತಕ್ಷೇಪ ಮಾಡಿದ ಕೂಡಲೇ ಅತ್ತ ರಷ್ಯಾ ಬಾಲ್ಟಿಕ್ ರಾಜ್ಯಗಳಿಗೆ ಬೆದರಿಕೆ ಒಡ್ಡುವ ಅಥವಾ ನೇರ ಮಿಲಿಟರಿ ಕಾರ್ಯಾಚರಣೆಗಿಳಿಯುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಈಗಾಗಲೇ ದಕ್ಷಿಣ ಚೀನಾ ಸಮುದ್ರದ ದ್ವೀಪ ಸಮೂಹಗಳನ್ನು ವಶಪಡಿಸಿಕೊಂಡಿದ್ದಷ್ಟೇ ಅಲ್ಲದೇ ಈ ದ್ವೀಪಗಳನ್ನು ತಮ್ಮ ಮಿಲಿಟರಿ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಯಿಸಿಕೊಂಡಿದ್ದಾರೆ. ಬಂದರುಗಳನ್ನು ಆಧುನೀಕರಿಸಲಾಗಿದೆ. ದ್ವೀಪಗಳನ್ನು ಕೃತಕವಾಗಿ ವಿಸ್ತರಿಸುವುದರ ಮೂಲಕ ಹೆಚ್ಚಿನ ಸೈನ್ಯ, ಯುದ್ಧ ವಿಮಾನಗಳು, ಯುದ್ಧ ನೌಕೆಗಳ ಜೊತೆ ಸದೃಢ ರಕ್ಷಣಾ ವಲಯಗಳನ್ನು ರಚಿಸಲಾಗಿದೆ. 'ದ ಆರ್ಟ್ ಆಫ್ ವಾರ್' ಪುಸ್ತಕದ ನಾಲ್ಕನೇ ಅಧ್ಯಾಯದಲ್ಲಿ ಬರೆದಿರುವಂತೆ, " ನಿಪುಣ ಯೋಧರು ಮೊದಲಿಗೆ ತಮ್ಮನ್ನು ತಾವು ಅಭೇಧ್ಯರನ್ನಾಗಿಸಿಕೊಳ್ಳುತ್ತಾರೆ ಮತ್ತು ಶತ್ರುಗಳು ದಾಳಿಗೆ ಸುಲಭ ತುತ್ತಾಗುವ ಕ್ಷಣಕ್ಕೋಸ್ಕರ ಕಾಯುತ್ತಾರೆ" ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಿರ್ಮಿಸಿಕೊಂಡಷ್ಟು ಮಿಲಿಟರಿ ನೆಲೆಗಳನ್ನು ಅಮೆರಿಕಾ ನಿರ್ಮಿಸಿಲ್ಲ. ಅಮೆರಿಕಾ ಪಿಲಿಪ್ಪೈನ್ಸ್ ಉಪಯೋಗಿಸಿಕೊಂಡು ದಾಳಿ ನಡೆಸಬಹುದಾದ ಸಾಧ್ಯತೆಗಳಿದ್ದರೂ, ಯುದ್ಧ ಸಂದರ್ಭದಲ್ಲಿ ಪಿಲಿಪ್ಪೈನ್ಸ್ ಒಪ್ಪಿಗೆ ಪಡೆದುಕೊಳ್ಳಲೇ ಬೇಕು. ಚೀನಾ ಮಾತ್ರ ಯಾರ ಹಂಗಿಲ್ಲದೇ ತನ್ನ ಮಿಲಿಟರಿ ನೆಲೆಗಳನ್ನು ಈಗಾಗಲೇ ಭದ್ರಪಡಿಸಿಕೊಡಿದೆ. 

ಏಷ್ಯಾ ಖಂಡದಲ್ಲಿ ಅಮೆರಿಕಾ ತನ್ನ ಮಿತ್ರ ರಾಷ್ಟ್ರಗಳ ಜೊತೆಗಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮತ್ತು ಹೊಸ ಗೆಳೆಯರನ್ನು ಸಂಪಾದಿಸಲು ಹಾತೊರೆಯುತ್ತಿದೆ. ಆದರೆ ಅಮೆರಿಕಾದ ಮಿತ್ರ ರಾಷ್ಟ್ರಗಳಾದ ದಕ್ಷಿಣ ಕೊರಿಯಾ ಮತ್ತು ಜಪಾನ್ ಮಧ್ಯೆ ಒಳಜಗಳಗಳಿರುವುದು ಚೀನಾಗೆ ಅನುಕೂಲಕರವಾಗಿದೆ. ಸನ್ ತ್ಸು ಪುಸ್ತಕದ ಮೂರನೇ ಅಧ್ಯಾಯದ ಪ್ರಕಾರ, " ಶತ್ರುವಿನ ಸಮರತಂತ್ರದ ಮೇಲೆ ದಾಳಿ ಮಾಡುವುದು ಯುದ್ಧದಲ್ಲಿ ಪ್ರಪ್ರಥಮ ಆದ್ಯತೆ ಪಡೆಯುತ್ತದೆ. ಎರಡನೇ ಆದ್ಯತೆ ಶತ್ರುವಿನ ಮೈತ್ರಿಕೂಟವನ್ನು ಛಿದ್ರಗೊಳಿಸುವುದು." ಚೀನಾಗೆ ಸವಾಲೊಡುವ ಉದ್ದೇಶದಿಂದಲೇ ಅಮೆರಿಕಾ ಪ್ರಾರಂಭಿಸಿದ ಟಿ.ಪಿ.ಪಿ ( Trans-Pacific Partnership) ಯಶಸ್ವಿಯಾಗದಿರಲು ಚೀನಾ ಎಲ್ಲಾ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಪೂರ್ವ ಏಷ್ಯಾದ ರಾಷ್ಟ್ರಗಳಿಗೆ ಲಾಭದಾಯಕ ವ್ಯಾಪಾರ, ರಕ್ಷಣಾ ಸಂಬಂಧ ಮತ್ತು ರಾಜಕೀಯ ನೆರವು ನೀಡುವ ಮೂಲಕ ಚೀನಾ ಆ ದೇಶಗಳನ್ನು ಅಮೆರಿಕಾದ ಪ್ರಭಾವಕ್ಕೆ ಒಳಗಾಗದಂತೆ ತಡೆಯುತ್ತಿದೆ. ಅಮೆರಿಕಾದ ಟಿ.ಪಿ.ಪಿ ಗೆ ಪ್ರತಿಸ್ಪರ್ಧಿಯಾಗಿ ಚೀನಾ ಆರ್.ಸಿ.ಇ.ಪಿ (Regional Comprehensive Economic Partnership) ರಚನೆ ಮಾಡಿ ಈ ಪ್ರದೇಶದಿಂದ ಅಮೆರಿಕಾವನ್ನು ಹೊರಗಿಡುವ ವ್ಯವಸ್ಥಿತ ಪ್ರಯತ್ನವೊಂದು ಈಗಾಗಲೇ ಜಾರಿಯಲ್ಲಿದೆ. ಹೇಗ್ ನ್ಯಾಯಾಧಿಕರಣದಲ್ಲಿ ಪಿಲಿಪ್ಪೈನ್ಸ್ ಕೈ ಮೇಲಾದ ನಂತರ ಪಿಲಿಪ್ಪೈನ್ಸ್ ಜೊತೆಗೂ ಸೌಹಾರ್ದಯುತ ಸಂಬಂಧಕ್ಕೆ ಚೀನಾ ಮುಂದಾಗಿರುವುದೇ ಇದಕ್ಕೆ ಸಾಕ್ಷಿ.

"ನೀವು ನಿಜಕ್ಕೂ ಬಲಶಾಲಿಯಾಗಿದ್ದಾಗ, ದುರ್ಬಲನಂತೆ ಕಾಣಿಸಿಕೊಳ್ಳಬೇಕು ಮತ್ತು ನಿಜಕ್ಕೂ ದುರ್ಬಲರಾಗಿದ್ದಾಗ ಬಲಶಾಲಿಯಂತೆ ತೋರ್ಪಡಿಸಿಕೊಳ್ಳಬೇಕು!" ಎಂದಿದ್ದ ಸನ್ ತ್ಸು ವಿಚಾರಗಳು ಇವತ್ತಿಗೆ ಚೀನಾ ರಾಜತಂತ್ರದಲ್ಲಿ ಮತ್ತೆ ಪ್ರಸ್ತುತ ಎನಿಸುತ್ತಿದೆ. ಸೇನಾಧಿಪತಿಯಾಗಿ ರಣರಂಗದ ವ್ಯಾವಹಾರಿಕ ಅನುಭವವಿದ್ದ ಸನ್ ತ್ಸು ಪುಸ್ತಕವೂ ಯುದ್ಧ ತಂತ್ರಗಳ ಕುರಿತಾಗಿಯೇ ಇದೆಯೆಂದ ಮಾತ್ರಕ್ಕೆ ಸನ್ ತ್ಸು ಒಬ್ಬ ಯುದ್ಧ ಪಿಪಾಸು ಎಂದುಕೊಳ್ಳುವಂತಿಲ್ಲ. ಯುದ್ಧ ಮಾಡಿ ಪಡೆಯುವ ನೂರು ವಿಜಯಗಳಿಗಿಂತ ಯುದ್ಧವಿಲ್ಲದೇ ಸಾಧಿಸುವ ಒಂದು ಜಯ ಅತ್ಯಂತ ಶ್ರೇಷ್ಠ ಎನ್ನುವ ಸನ್ ತ್ಸು "ಯುದ್ಧವನ್ನೇ ಮಾಡದೇ ಶತ್ರುವನ್ನು ನಿಗ್ರಹಿಸುವುದು ಅತ್ಯಂತ ಶ್ರೇಷ್ಠ ಸಮರ ಕಲೆ" ಎಂದು ಅಭಿಪ್ರಾಯ ಪಡುತ್ತಾನೆ. ಚೀನೀ ನಾಯಕರು ತಮ್ಮ ಆಕ್ರಮಣಕಾರಿ ನೀತಿಯಲ್ಲಿ ಸನ್ ತ್ಸು ವಿಚಾರಗಳನ್ನು ಯಾವ ರೀತಿ ಅಳವಡಿಸಿಕೊಂಡಿದ್ದಾರೆ ಎನ್ನುವುದು ಈಗಾಗಲೇ ಸ್ಪಷ್ಟ. ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಚೀನಾ ಆಯ್ದುಕೊಂಡ ಆಯ್ಕೆಗಳಿಗೂ 'ದ ಆರ್ಟ್ ಆಫ್ ವಾರ್' ಪುಸ್ತಕದಲ್ಲಿರುವ ತಂತ್ರಗಳಿಗೂ ಬಹಳಷ್ಟು ಸಾಮ್ಯತೆಗಳಿವೆ. ಸನ್ ತ್ಸು ಸಮರತಂತ್ರಗಳನ್ನು ಗಮನಿಸಿದಾಗ ಭಾರತದ ಶ್ರೇಷ್ಠ ಸಮರತಂತ್ರಜ್ಞ ಮತ್ತು ರಾಜತಾಂತ್ರಿಕ ನಿಪುಣ ಆಚಾರ್ಯ ಚಾಣಕ್ಯರ ನೆನಪಾಗದೇ ಇರಲಾರದು. ಚೀನಾ ಜೊತೆಗೆ ಗಡಿ ಮತ್ತಿನ್ನಿತರ ತಕರಾರುಗಳನ್ನು ನಿಭಾಯಿಸಬೇಕಾದ ಭಾರತವೂ ಚೀನಾದ ಈ ಹೊಸ ನಡೆಗಳಿಗೆ ಪ್ರತಿತಂತ್ರ ಹುಡುಕುವ ಅನಿವಾರ್ಯತೆಯಿದೆ.

(This article was published in Hosa Digantha newspaper on 22 November 2016)






      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bengaluru



      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ