ಶನಿವಾರ, ನವೆಂಬರ್ 19, 2016

ಮೊಸುಲ್ ನಲ್ಲಿ ಮೊಳಗಿದೆ ಮರಣ ಮೃದಂಗ

ಅಮೆರಿಕಾ, ಇರಾಕ್, ಟರ್ಕಿ, ಕರ್ದಿಶ್, ಶಿಯಾ ಪಡೆಗಳು, ಇಸ್ಲಾಮಿಕ್ ಸ್ಟೇಟ್ ಉಗ್ರರು ಹಾಗೂ ಇನ್ನಿತರ ಹಲವು ಶಕ್ತಿಗಳ ಬಲಪ್ರದರ್ಶನಕ್ಕಿರುವ ಕುಸ್ತಿಯ ಕಣದಂತಾಗಿದೆ ಸದ್ಯದ ಮೊಸುಲ್ ಪರಿಸ್ಥಿತಿ.
-      ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು
ಅಲಯನ್ಸ್ ವಿಶ್ವವಿದ್ಯಾಲಯ)


ಕೊನೆಗೂ ಇರಾಕ್ ಸರಕಾರ ಮತ್ತು ಕರ್ದಿಶ್ ಗುಂಪುಗಳು ಮೊಸುಲ್ ಅನ್ನು ಇಸ್ಲಾಮಿಕ್ ಸ್ಟೇಟ್ ಕಪಿಮುಷ್ಟಿಯಿಂದ ಬಿಡಿಸುವತ್ತ ದಿಟ್ಟ ಹೆಜ್ಜೆಯಿಟ್ಟಿವೆ.  ಅಮೆರಿಕಾ ಕೂಡ ಈ ಪ್ರಯತ್ನಕ್ಕೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವುದರಿಂದ ಈ ಬಾರಿ ಮೊಸುಲ್ ನಲ್ಲಿ ಭಾರಿ ಪ್ರಮಾಣದ ಸಂಘರ್ಷ ನಿಶ್ಚಿತ. ಈಗಾಗಲೇ ನೆಲೆ ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ ಮೊಸುಲ್ ರಣರಂಗದಲ್ಲಿ ಯಶಸ್ಸು ಕಾಣುವ ಸಾಧ್ಯತೆಗಳಿಲ್ಲದೇ ಹೋದರೂ, ಯುದ್ಧದ ಫಲಿತಾಂಶವನ್ನು ಆದಷ್ಟು ಮುಂದೂಡುವ ಮತ್ತು ಅಪಾರ ಪ್ರಮಾಣದ ರಕ್ತಪಾತವಾಗುವಂತೆ ಮಾಡುವ ಎಲ್ಲಾ ಅವಕಾಶಗಳೂ ಇವೆ.

ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಇಸ್ಲಾಮಿಕ್ ಸ್ಟೇಟ್ ಇರಾಕ್ ನಲ್ಲಿ ಉಳಿಸಿಕೊಂಡಿರುವ ಕೊನೆಯ ನೆಲೆ ಮೊಸುಲ್. ಅಮೆರಿಕಾ ಬೆಂಬಲಿತ ಇರಾಕಿ ಮತ್ತು ಕರ್ದಿಶ್ ಪಡೆಗಳು ಮೊಸುಲ್ ವಶಪಡಿಸಿಕೊಳ್ಳಲು ಈಗಾಗಲೇ ಕಾರ್ಯಾಚರಣೆ ಆರಂಭಿಸಿವೆ. ಇಸ್ಲಾಮಿಕ್ ಸ್ಟೇಟ್ ಗೆ ಮೊಸುಲ್ ನಲ್ಲಿ ಯುದ್ಧಾನುಕೂಲಗಳು  ಕಡಿಮೆ ಇರುವುದರಿಂದ ಹತ್ತಿರದ ಸಿರಿಯಾ ಅಥವಾ ಜಝೀರಾ ಮರುಭೂಮಿ ಪ್ರದೇಶಕ್ಕೆ ಹಿಂದೆ ಸರಿದು, ಸಮಯ ನೋಡಿಕೊಂಡು ಪ್ರತಿ ದಾಳಿ ನಡೆಸುವ ಅವಕಾಶಗಳು ಇಸ್ಲಾಮಿಕ್ ಸ್ಟೇಟ್ ಗೆ ಮುಕ್ತವಾಗಿವೆ. ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಜಝೀರಾ ಮರುಭೂಮಿ ಮತ್ತಿತರ ಪ್ರದೇಶಗಳಲ್ಲಿ ತಕ್ಕಮಟ್ಟಿಗೆ ಸಮರತಾಂತ್ರಿಕ ಅನುಕೂಲಗಳಿರುವುದರಿಂದ ಈ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇನ್ನೊಂದೆಡೆ ಮೊಸುಲ್ ನ ನಾಗರಿಕರನ್ನೇ ತನ್ನ ಗುರಾಣಿಗಳನ್ನಾಗಿ ಬಳಸಿಕೊಂಡು ಇರಾಕಿ ಮತ್ತು ಕರ್ದಿಶ್ ಪಡೆಗಳನ್ನು ಎದುರಿಸುವ ಪ್ರಯತ್ನಗಳನ್ನೂ ಮಾಡಬಹುದು. ಸದ್ಯದ ಮಾಹಿತಿಗಳ ಪ್ರಕಾರ ಈಗಾಗಲೇ ಉಗ್ರರು ಈ ತಂತ್ರವನ್ನು ಮೊಸುಲ್ ನ ವಿವಿಧ ಭಾಗಗಳಲ್ಲಿ ಕಾರ್ಯರೂಪಕ್ಕಿಳಿಸಿದ್ದಾರೆ!

ಇರಾಕಿನ ಪ್ರಧಾನ ಮಂತ್ರಿ ಹೈದರ್ ಅಲ್ ಅಬಾದಿ ಮೊಸುಲ್ ಕಾರ್ಯಾಚರಣೆಯಲ್ಲಿ ಇರಾಕ್ ಸೈನ್ಯ ಮತ್ತು ರಾಷ್ಟ್ರೀಯ ಪೊಲೀಸ್ ಪಡೆಗಳು ಮಾತ್ರ ಭಾಗವಹಿಸುತ್ತವೆ ಎಂದಿದ್ದಾರಾದರೂ, ಕರ್ದಿಶ್ ಪಡೆಗಳು ಈಗಾಗಲೇ ಮೊಸುಲ್ ನ ಕರ್ದಿಶ್ ಪ್ರದೇಶಗಳ ಮೇಲೇ ದಾಳಿ ನಡೆಸುವುದು ಖಚಿತ. ಇದಷ್ಟೇ ಅಲ್ಲದೇ ಇರಾನ್ ಬೆಂಬಲಿನ ಶಿಯಾ ಹೋರಾಟಗಾರರು ಕೂಡ ಮೊಸುಲ್ ರಣರಂಗಕ್ಕೆ ಧುಮುಕಿದ್ದಾರೆ. ಈ ಮೂಲಕ ಶಿಯಾ-ಸುನ್ನಿ ಸಂಘರ್ಷಗಳೂ ಮಿತಿಮೀರುವ ಎಲ್ಲ ಸಾಧ್ಯತೆಗಳನ್ನು ಮೊಸುಲ್ ತೆರೆದಿಟ್ಟಿದೆ. ಈ ಮಧ್ಯೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಮೊಸುಲ್ ನಲ್ಲಿ ಹಸ್ತಕ್ಷೇಪ ಮಾಡಲು ಉತ್ಸುಕರಾಗಿರುವುದು ಟರ್ಕಿ ಮತ್ತು ಇರಾಕ್ ಮಧ್ಯೆ ಛಾಯಾಸಮಾರಕ್ಕೆ ಎಡೆ ಮಾಡಿಕೊಟ್ಟಿದೆ. ಎರ್ಡೊಗನ್ ಮೊಸುಲ್ ನಲ್ಲಿರುವ ಸುನ್ನಿ ಟರ್ಕರಿಗೆ ನೆರವು ನೀಡುವ ನೆಪದಲ್ಲಿ ಯಾವ ಕ್ಷಣದಲ್ಲಾದರೂ ಮೊಸುಲ್ ನಲ್ಲಿ ಪೂರ್ಣಪ್ರಮಾಣದ ಕಾರ್ಯಾಚರಣೆ ಆರಂಭಿಸಬಹುದು. ಈಗಾಗಲೇ ಮೊಸುಲ್ ಸನಿಹದಲ್ಲಿ ಬೀಡು ಬಿಟ್ಟಿರುವ ಟರ್ಕಿ ಸೇನೆ ಇರಾಕ್ ಮತ್ತು ಟರ್ಕಿ ಸೇನೆಗಳ ನೇರ ಸಂಘರ್ಷಕ್ಕೂ ದಾರಿ ಕೊಡಬಹುದು. ಅಮೆರಿಕಾ, ಇರಾಕ್, ಟರ್ಕಿ, ಕರ್ದಿಶ್, ಶಿಯಾ ಪಡೆಗಳು, ಇಸ್ಲಾಮಿಕ್ ಸ್ಟೇಟ್ ಉಗ್ರರು ಹಾಗೂ ಇನ್ನಿತರ ಹಲವು ಶಕ್ತಿಗಳ ಬಲಪ್ರದರ್ಶನಕ್ಕಿರುವ ಕುಸ್ತಿಯ ಕಣದಂತಾಗಿದೆ ಸದ್ಯದ ಮೊಸುಲ್ ಪರಿಸ್ಥಿತಿ.

ಕರ್ದಿಶ್ ಹೋರಾಟಗಾರರು ಮತ್ತು ಇರಾಕಿನ ಸರಕಾರಗಳೆರಡೂ ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕರಿಸುತ್ತಿದ್ದರೂ ತೆರೆಮರೆಯಲ್ಲಿ ಅವರದ್ದೇ ಆದ ಪ್ರತ್ಯೇಕ ಉದ್ದೇಶಗಳಿವೆ. ಕರ್ದಿಶ್ ಸ್ವಾಧೀನದಲ್ಲಿರುವ ಕಿರ್ಕುಕ್ ಮತ್ತಿತರ ಪ್ರದೇಶಗಳ ವಿಚಾರದಲ್ಲಿ ಇರಾಕ್ ಜೊತೆ ಕರ್ದಿಶ್ ನಾಯಕ ಮಸೂದ್ ಬರ್ಝಾನಿಗೆ ಬಲವಾದ ಭಿನ್ನಾಭಿಪ್ರಾಯಗಳಿವೆ. ಮೊಸುಲ್ ಯುದ್ಧ ಅಂತ್ಯದೊಂದಿಗೆ ಕರ್ದಿಶ್ ಸಮುದಾಯ ಇರಾಕ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂಬ ವಿಷಯ ಗುಟ್ಟಾಗಿ ಉಳಿದಿಲ್ಲ. ಕರ್ದಿಶ್ ಪ್ರಾಬಲ್ಯದ ನೈನಿವಾದಂಥ ಪ್ರದೇಶಗಳನ್ನು ಕರ್ದಿಸ್ತಾನದೊಂದಿಗೆ ವಿಲೀನಗೊಳಿಸುವುದೋ ಅಥವಾ ಇರಾಕ್ ಸಂಯುಕ್ತ ಪದ್ಧತಿಯಲ್ಲಿ ಸ್ವಾಯತ್ತ ಪ್ರದೇಶವನ್ನಾಗಿಸುವುದೋ ಎಂಬ ಗೊಂದಲಗಳು ಇನ್ನಷ್ಟು ಸಂಕೀರ್ಣವಾಗಿವೆ.

ಯುದ್ಧ ನಂತರದಲ್ಲಿ ಮೊಸುಲ್ ನ ಪುನರ್ನಿರ್ಮಾಣದ ಕುರಿತಾಗಿಯೂ ಯುದ್ಧದ ಪ್ರೇರಕ ಶಕ್ತಿ ಅಮೆರಿಕಾ ಯಾವುದೇ ಸ್ಪಷ್ಟ ನಿಲುವು ಹೊಂದಿಲ್ಲ. ಯುದ್ಧ ಸಂಧರ್ಭದಲ್ಲಿ ಮೊಸುಲ್ ನಾಗರಿಕರಿಗೆ ಆಶ್ರಯ ಒದಗಿಸಲು ಬರಾಕ್ ಒಬಾಮ ಕೆಲವೊಂದು ಕ್ರಮ ಕೈಗೊಂಡಿದ್ದರೂ, ದೀರ್ಘಕಾಲೀನ ಸಮಸ್ಯೆಗಳನ್ನೆದುರಿಸುವ ಯಾವುದೇ ಕಾರ್ಯಕ್ರಮ ಅಮೆರಿಕಾ ಬತ್ತಳಿಕೆಯಲ್ಲಿಲ್ಲ. ಜಾಗತಿಕ ತೈಲ ಬೆಲೆಗಳ ಕುಸಿತ ಮತ್ತು ಸದ್ಯದ ತುರ್ತು ಪರಿಸ್ಥಿತಿಯಿಂದಾಗಿ ಇರಾಕ್ ಕೂಡ ಆರ್ಥಿಕವಾಗಿ ದುರ್ಬಲವಾಗಿದೆ. ಇವೆಲ್ಲವನ್ನು ಅವಲೋಕಿಸಿದಾಗ ಯುದ್ಧದ ನಂತರ ಮೊಸುಲ್ ಕೂಡ ಫಲ್ಲುಜಾಹ್ ಮತ್ತು ರಾಮದಿ ಹಾದಿಯಲ್ಲಿಯೇ ಸಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮೊಸುಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಸೋಲಿನೊಂದಿಗೆ ಎಲ್ಲವೂ ಸರಿಹೋಗುವುದಿಲ್ಲ ಎನ್ನುವುದಂತೂ ಸತ್ಯ. ಹಿಂದಿನ ಇರಾಕಿ ಸರಕಾರಗಳ ಆಡಳಿತ ನೀತಿಯೇ ಇರಾಕಿನ ಕೆಲ ಪ್ರದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಗೆ ಅವಕಾಶ ಸೃಷ್ಟಿಸಿತ್ತು. 2006-09ರಲ್ಲಿ ಅಲ್ ಖೈದಾ ಸೋಲಿನೊಂದಿಗೇ ಇರಾಕಿನಲ್ಲಿ ಹುಟ್ಟಿಕೊಂಡ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್. ಇರಾಕ್ ಆಡಳಿತ ನೀತಿಯಲ್ಲಿ ಸುಧಾರಣೆಗಳಾಗದೇ ಹೋದಲ್ಲಿ ಮೊಸುಲ್ ಯುದ್ಧದಲ್ಲೂ ಇಸ್ಲಾಮಿಕ್ ಸ್ಟೇಟ್ ಸೋಲಿನೊಂದಿಗೆ ಇನ್ನಿತರ ಉಗ್ರ ಗುಂಪುಗಳು ರಕ್ತ ಬೀಜಾಸುರರಂತೆ ಹುಟ್ಟಿಕೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ.

ಕೆಲ ಅಂತರ್ರಾಷ್ಟ್ರೀಯ ರಾಜಕಾರಣದ ವಿಶ್ಲೇಷಕರ ಪ್ರಕಾರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಒಬಾಮ ಆಡಳಿತ ಮಧ್ಯ ಪ್ರಾಚ್ಯದಲ್ಲಿ ಒಂದು ಪ್ರಯೋಗ ನಡೆಸುವ ತರಾತುರಿಯಲ್ಲಿದೆ. ಹಾಗಾಗಿಯೇ ಮೊಸುಲ್ ಯುದ್ಧದ ಸಮಯದಲ್ಲಾಗುವ ಅನಾಹುತಗಳು, ಯುದ್ದದ ನಂತರದಲ್ಲಿ ಮೊಸುಲ್ ಭವಿಷ್ಯದ ಕುರಿತಾಗಿ ಅಮೆರಿಕಾಕ್ಕೆ ಅಷ್ಟೊಂದು ಗಂಭೀರ ಯೋಚನೆಗಳಿಲ್ಲ. 'ಗೆದ್ದರೆ ಆಡೊದಿಕ್ಕೆ ಬಂದೆ, ಸೋತರೆ ನೋಡೊದಿಕ್ಕೆ ಬಂದೆ' ಎಂಬ ಗಾದೆಯಂತಾಗಿದೆ ಅಮೆರಿಕಾದ ಸದ್ಯದ ಮನಸ್ಥಿತಿ! ಮೊಸುಲ್ ಯುದ್ಧದಲ್ಲಿ ಇಸ್ಲಾಮಿಕ್ ಸ್ಟೇಟ್ ಸೋಲಿನೊಂದಿಗೆ, ಅಮೆರಿಕಾ ಮತ್ತು ಇರಾಕ್ ಈ ಪ್ರದೇಶದ ಭವಿಷ್ಯದ ಬಗ್ಗೆ ಸ್ಪಷ್ಟ ಯೋಜನೆಗಳೊಂದಿಗೆ ಹೊರಬಂದಲ್ಲಿ, ಈ ಯುದ್ಧ ಚರಿತ್ರೆಯಲ್ಲಿ ಘಟಿಸಿಹೋದ ಬೆರಳೆಣಿಕೆಯ ನಿರ್ಣಾಯಕ ಯುದ್ಧಗಳ ಪಟ್ಟಿ ಸೇರುತ್ತದೆ. ಹಾಗಾಗದೇ ಹೋದಲ್ಲಿ ಈಗಾಗಲೇ ವಿಶ್ವ ಕಂಡಿರುವ ಹಲವು ವ್ಯರ್ಥ ಯುದ್ಧಗಳಲ್ಲಿ ಒಂದಾಗಿ ರಕ್ತಪಾತ ಮತ್ತು ವಿಧ್ವಂಸಕ್ಕಷ್ಟೇ ಸೀಮಿತವೆನಿಸಿಕೊಳ್ಳುತ್ತದೆ.

(This article was published in Hosa Digantha newspaper on 25 October 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ