ಶನಿವಾರ, ನವೆಂಬರ್ 19, 2016

ಭಾರತ-ಇಸ್ರೇಲ್ ಮೈತ್ರಿ ಮತ್ತು ಪ್ಯಾಲೆಸ್ಟೀನ್ ವಿವಾದ ?

ಭಾರತದ ಆರ್ಥಿಕ, ರಾಜಕೀಯ ಮತ್ತು ಸಮರತಾಂತ್ರಿಕ ಆಸಕ್ತಿಗಳ ಜೊತೆ ರಾಜಿ ಮಾಡಿಕೊಳ್ಳದೆ ಪ್ಯಾಲೆಸ್ಟೀನ್-ಇಸ್ರೇಲ್ ವಿವಾದ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಕೆಡುಕಾಗದಂತೆ ಪಶ್ಚಿಮ ಏಷ್ಯಾದಲ್ಲಿ ಭಾರತ ತನ್ನ ಮುಂದಿನ ಹೆಜ್ಜೆ ಇಡುವ ಅನಿವಾರ್ಯತೆಯಿದೆ.
-  ಕೀರ್ತಿರಾಜ್
(ರಾಜ್ಯಶಾಸ್ತ್ರ ಮತ್ತು ಅಂತರ್ರಾಷ್ಟ್ರೀಯ ರಾಜಕೀಯ ಪ್ರಾಧ್ಯಾಪಕರು)

2014ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೇರುವುದರೊಂದಿಗೆ, ಪಶ್ಚಿಮ ಏಷ್ಯಾ ರಾಷ್ಟ್ರಗಳತ್ತ ಭಾರತದ ವಿದೇಶಾಂಗ ನೀತಿ ಹೊಸ ತಿರುವು ಪಡೆದುಕೊಂಡಿದೆ. ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಿಕೊಳ್ಳುವತ್ತ ಭಾರತ ಹೆಚ್ಚಿನ ಒಲವು ತೋರಿಸುತ್ತಿದೆ. ರಕ್ಷಣಾ ವಲಯ, ಭಯೋತ್ಪಾದನಾ ನಿಗ್ರಹ, ತಂತ್ರಜ್ಞಾನ, ಕೃಷಿ, ಬಾಹ್ಯಾಕಾಶ ಮತ್ತಿನ್ನಿತರ ಕ್ಷೇತ್ರಗಳಲ್ಲಿ ಈಗಾಗಲೇ ಭಾರತ ಮತ್ತು ಇಸ್ರೇಲ್ ಗಳ ನಡುವೆ ಗಮನಾರ್ಹ ಬಾಂಧವ್ಯವಿದೆ. ಇಸ್ರೇಲ್ ಜೊತೆಗೆ ಮೋದಿ ಸಂಬಂಧ ಹೊಸದೇನಲ್ಲ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೇ, ಗುಜರಾತ್ ಕೇಂದ್ರ ಸರಕಾರಕ್ಕಿಂತ ವಿಭಿನ್ನ ಮತ್ತು ಸ್ವತಂತ್ರ ಆರ್ಥಿಕ ಯೋಜನೆಗಳನ್ನು ಅಳವಡಿಸಿಕೊಂಡು ಬೆಳೆಯುವುದರ ಹಿಂದೆಯೂ ಇಸ್ರೇಲ್ ಪ್ರಮುಖ ಪಾತ್ರ ವಹಿಸಿತ್ತು! ಹೀಗಂದ ಮಾತ್ರಕ್ಕೆ ಮೋದಿ ಪ್ರಧಾನಿಯಾದ ಕೂಡಲೇ ಪ್ಯಾಲೆಸ್ಟೀನ್ ಕುರಿತಾಗಿ ಭಾರತ ದಶಕಗಳಿಂದ ಪಾಲಿಸಿಕೊಂಡು ಬಂದ ನೀತಿಯಲ್ಲೇನೂ ಮೂಲಭೂತ ಬದಲಾವಣೆಗಳಾಗಿಲ್ಲ. ಆದರೆ ಪ್ಯಾಲೆಸ್ಟೀನ್ ವಿಷಯದಲ್ಲಿ ಭಾರತ ತನ್ನನ್ನು ತಾನು ಗಮನಾರ್ಹವಾಗಿ ಸೀಮಿತಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಆರಂಭದಿಂದಲೂ ಭಾರತ ಮತ್ತು ಇಸ್ರೇಲ್ ಗಳ ರಾಜತಾಂತ್ರಿಕ ಸಂಬಂಧಗಳ ಮೇಲೆ ಇಸ್ರೇಲ್-ಪ್ಯಾಲೆಸ್ಟೀನ್ ಸಮಸ್ಯೆ ಆಗಾಧ ಪರಿಣಾಮ ಬೀರಿದೆ. ಭಾರತದ ವಿದೇಶಾಂಗ ನೀತಿ ಪ್ಯಾಲೆಸ್ಟೀನ್ ಪರವಾಗಿದ್ದು, ಭಾರತ ಜಾಗತಿಕ ವೇದಿಕೆಯಲ್ಲಿ ಪ್ಯಾಲೆಸ್ಟೀನ್ ಸ್ವತಂತ್ರ ರಾಷ್ಟ್ರದ ಪರ ನಿಲುವನ್ನು ಕಾಪಾಡಿಕೊಂಡು ಬಂದಿದೆ. ಪಶ್ಚಿಮ ಏಷ್ಯಾದ ಅರಬ್ ದೇಶಗಳೊಂದಿಗೆ ಸೌಹಾರ್ದ ಕಾಯ್ದುಕೊಳ್ಳುವ ಅನಿವಾರ್ಯತೆಯಿಂದಾಗಿ ಇಸ್ರೇಲ್ ಜೊತೆಗಿನ ಸಂಬಂಧಗಳನ್ನು ಭಾರತ ಕಡೆಗಣಿಸಬೇಕಾಯ್ತು. 1992ರಲ್ಲಿ ನರಸಿಂಹ ರಾವ್ ಮುಂದಾಳತ್ವ ಇಸ್ರೇಲ್ ಜೊತೆಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ನಡೆಗಳಿಗೆ ಸಾಕ್ಷಿಯಾದರೂ, ಭಾರತ ಪ್ಯಾಲೆಸ್ಟೀನ್ ಗೆ ನೀಡುತ್ತಿದ್ದ ಬೆಂಬಲ ಕಡಿಮೆಯಾಗಿಲ್ಲದೇ ಇರುವುದು ಭಾರತ- ಇಸ್ರೇಲ್ ಸಂಬಂಧಗಳಲ್ಲಿರುವ ವಿರೋಧಾಭಾಸಗಳಿಗೆ ಸಾಕ್ಷಿಯಾಗಿದೆ.

ಈವರೆಗೆ ಇಸ್ರೇಲ್ ಗೆ ಭೇಟಿ ನೀಡಿದ ಭಾರತದ ರಾಜತಾಂತ್ರಿಕ ಪ್ರತಿನಿಧಿಗಳು, ಪ್ಯಾಲೆಸ್ಟೀನ್ ಗೂ ಭೇಟಿ ನೀಡುವುದರ ಮೂಲಕ ಭಾರತಕ್ಕೆ ಪ್ಯಾಲೆಸ್ಟೀನ್ ಜೊತೆಗಿನ ಸಂಬಂಧಗಳೂ ಮಹತ್ವಪೂರ್ಣ ಎಂಬ ಸಂದೇಶ ರವಾನೆಯಾಗಿದೆ. 2000ದಲ್ಲಿ ಕೇಂದ್ರ ಗೃಹ ಸಚಿವ ಎಲ್. ಕೆ. ಅಡ್ವಾನಿ ಮತ್ತು ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಹಾಗೂ 2012ರಲ್ಲಿ ವಿದೇಶಾಂಗ ಸಚಿವ ಎಸ್. ಎಂ ಕೃಷ್ಣ ಇಸ್ರೇಲ್ ಭೇಟಿ ನೀಡುತ್ತಾರೆ. ಅದರೆ ಈ ವಿದೇಶ ಪ್ರವಾಸ ಇಸ್ರೇಲ್ ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಭಾರತದ ಸಚಿವರು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಾಯಕರೊಂದಿಗೆ ಸಮಾನ ಮಾತುಕತೆ ನಡೆಸುತ್ತಾರೆ . ಹೀಗಾಗಿ ಈ ಪ್ರಯತ್ನಗಳು ಪ್ರಾದೇಶಿಕ ಭೇಟಿಗಳಾಗಿ ಪರಿಗಣಿಸಲ್ಪಟ್ಟಿವೆಯೇ ವಿನಃ ಇಸ್ರೇಲ್ ಭೇಟಿ ಎಂದಲ್ಲ. ಈ ಹಿನ್ನೆಲೆಯಲ್ಲಿ 2014 ರ ನವೆಂಬರ್ ನಲ್ಲಿ ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಇಸ್ರೇಲ್ ಭೇಟಿ ಮಹತ್ವದ ರಾಜತಾಂತ್ರಿಕ ಹೆಜ್ಜೆಯಾಗಿ ಗುರುತಿಸಲ್ಪಡುತ್ತದೆ. ಕಾರಣ ರಾಜನಾಥ್ ಸಿಂಗ್ ಭೇಟಿ ಇಸ್ರೇಲ್ ಗೆ ಮಾತ್ರ ಸೀಮಿತವಾಗಿರುತ್ತದೆ. ಪ್ಯಾಲೆಸ್ಟೀನ್ ಕಡೆಗಣಿಸುವ ಮೂಲಕ ಮೋದಿ ಸರಕಾರ ಪಶ್ಚಿಮ ಏಷ್ಯಾ ಕುರಿತಾದ ಸಾಂಪ್ರದಾಯಿಕ ವಿದೇಶಾಂಗ ನೀತಿಯಲ್ಲಿ ಕ್ರಾಂತಿಕಾರಿ ಹೆಜ್ಜೆ ಎಂಬ ಬಗ್ಗೆ ಚರ್ಚೆಗಳೂ ನಡೆದಿತ್ತು. ಈ ವಿಷಯವಾಗಿ ಹೆಚ್ಚಿನ ಚರ್ಚೆ ವಿವಾದಗಳಿಗೆ ಆಸ್ಪದ ನೀಡದೆ ಮುಂದೆ ಅಕ್ಟೋಬರ್ 2015ರಲ್ಲಿ ಪ್ರಣಬ್ ಮುಖರ್ಜಿ ಇಸ್ರೇಲ್ ಜೊತೆಗೆ ಪ್ಯಾಲೆಸ್ಟೀನ್ ಮತ್ತು ಜೋರ್ಡಾನ್ ಗಳಿಗೆ ಭೇಟಿ ನೀಡಿದ್ದರು. ಜನವರಿ 2016 ರ ವಿದೇಶ ಪ್ರವಾಸದಲ್ಲಿ ಸುಷ್ಮಾ ಸ್ವರಾಜ್ ಇಸ್ರೇಲ್, ಪ್ಯಾಲೆಸ್ಟೀನ್ ಮತ್ತು ಜೋರ್ಡಾನ್ ಗಳಿಗೆ ಭೇಟಿ ನೀಡಿ ಪ್ಯಾಲೆಸ್ಟೀನ್ ಪರವಾದ ಭಾರತದ ನಿಲುವನ್ನು ಸಮರ್ಥಿಸಿಕೊಂಡರು.

ಸೆಪ್ಟೆಂಬರ್ 2014ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆ ಕಾರ್ಯಕ್ರಮವೊಂದರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತವಾಗಿ ಮೋದಿಯವರನ್ನು ಇಸ್ರೇಲ್ ಗೆ ಆಹ್ವಾನಿಸಿದ್ದಾರೆ. ಮುಂದೆ ಮಾರ್ಚ್ 2015ರಲ್ಲಿ ಸಿಂಗಾಪೂರ್ ನಲ್ಲಿ ನಡೆದ ಅನೌಪಚಾರಿಕ ಕಾರ್ಯಕ್ರಮವೊಂದರಲ್ಲಿ ಇಸ್ರೇಲ್ ಅಧ್ಯಕ್ಷ ರೇವೆನ್ ರಿವ್ಲಿನ್ ರನ್ನು ಭೇಟಿ ಮಾಡಿದ ಮೋದಿ ಇಸ್ರೇಲ್ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಮೋದಿ ಇಸ್ರೇಲ್ ಗೆ ಮಾತ್ರ ಭೇಟಿ ನೀಡಿದಲ್ಲಿ ಭಾರತ ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬಂದ ಸಾಂಪ್ರದಾಯಿಕ ವಿದೇಶಾಂಗ ನೀತಿಗೆ ತಿಲಾಂಜಲಿ ಇಟ್ಟಂತಾಗುತ್ತದೆ. ಸ್ವತಂತ್ರ ಪ್ಯಾಲೆಸ್ಟೀನ್ ರಾಜ್ಯವನ್ನು ಸತತವಾಗಿ ಬೆಂಬಲಿಸಿಕೊಂಡು ಬಂದ ಭಾರತ ತನ್ನ ನೀತಿಯನ್ನು ಇಸ್ರೇಲ್ ಪರ ನೀತಿಯನ್ನಾಗಿ ಬದಲಾಯಿಸಿಕೊಳ್ಳುತ್ತದೆ. ಇದರೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಅರಬ್ ರಾಷ್ಟ್ರಗಳೊಂದಿಗೆ ಕಾಪಾಡಿಕೊಂಡು ಬಂದ ಸೌಹಾರ್ದತೆಯನ್ನೂ ಇಸ್ರೇಲ್ ಮಿತೃತ್ವಕ್ಕೋಸ್ಕರ ಪಣಕ್ಕಿಡಬೇಕಾಗುತ್ತದೆ. ಪೆಟ್ರೋಲಿಯಂ ಇನ್ನಿತರ ಶಕ್ತಿಮೂಲಗಳಿಗಾಗಿ ಇರಾನ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ಮೇಲೆ ಭಾರತ ಅವಲಂಬಿತವಾಗಿದ್ದು ಇಸ್ರೇಲ್ ಸ್ನೇಹ ಈ ದೇಶಗಳೊಂದಿಗೆ ವೈರತ್ವಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದಲ್ಲದೇ 2017ರ ಉತ್ತರ ಪ್ರದೇಶ ಚುನಾವಣೆಗಳ ಮೇಲೆ ಇದು ದುಬಾರಿ ಪರಿಣಾಮ ಬೀರುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದಲ್ಲಿರುವ ಗಮನಾರ್ಹ ಮುಸ್ಲಿಂ ಜನಸಂಖ್ಯೆಯನ್ನೂ ಗಮನದಲ್ಲಿಟ್ಟುಕೊಂಡರೆ, ಬಿ.ಜೆ.ಪಿ ಗೆ ಪ್ಯಾಲೆಸ್ಟೀನ್ ವಿರೋಧಿ ನೀತಿ ಮುಂದಿನ ಚುನಾವಣೆಯಲ್ಲಿ ಮಾರಕವಾಗಬಹುದು. ಅಂತರಾಷ್ಟ್ರೀಯ ಮಟ್ಟದಲ್ಲೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಪ್ರಯತ್ನಿಸುತ್ತಿರುವ ಭಾರತಕ್ಕೆ ಅರಬ್ ದೇಶಗಳ ಬೆಂಬಲ ಅತ್ಯಗತ್ಯ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅರಬ್ ದೇಶಗಳ ಸಂಖ್ಯಾಬಲ ಭಾರತದ ಆಕಾಂಕ್ಷೆಗೆ ಮುಳ್ಳಾಗಬಹುದು. ಹೀಗಾಗಿ ಭಾರತದ ಆರ್ಥಿಕ, ರಾಜಕೀಯ ಮತ್ತು ಸಮರತಾಂತ್ರಿಕ ಆಸಕ್ತಿಗಳ ಜೊತೆ ರಾಜಿ ಮಾಡಿಕೊಳ್ಳದೆ ಪ್ಯಾಲೆಸ್ಟೀನ್-ಇಸ್ರೇಲ್ ವಿವಾದ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಕೆಡುಕಾಗದಂತೆ ಪಶ್ಚಿಮ ಏಷ್ಯಾದಲ್ಲಿ ಭಾರತ ತನ್ನ ಮುಂದಿನ ಹೆಜ್ಜೆ ಇಡುವ ಅನಿವಾರ್ಯತೆಯಿದೆ.

ನಡೆದುಹೋದ ಘಟನೆಗಳೇನೇ ಇದ್ದರೂ ಭಾರತ ವಿದೇಶಾಂಗ ನೀತಿ ಚರಿತ್ರೆಯ ಸಂಕೋಲೆಗಳನ್ನು ಬೀಡಿಸಿಕೊಂಡು ಹೊಸ ಗಮ್ಯದತ್ತ ದೃಷ್ಟಿ ನೆಟ್ಟಿದೆ. ಎಪ್ರಿಲ್ 2016ರಲ್ಲಿ ಯುನೆಸ್ಕೋ ಸಾಮಾನ್ಯ ಸಭೆಯೊಂದರಲ್ಲಿ ಭಾರತ ಮತ್ತು ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳು ಅಲ್- ಅಕ್ಸಾ ಮಸೀದಿ ಮತ್ತು ಹರಾಮ್ ಅಲ್-ಶರೀಫ್ ಗಳಲ್ಲಿ ಇಸ್ರೇಲ್ ದೌರ್ಜನ್ಯ ವಿರೋಧಿಸಿ ಇಸ್ರೇಲನ್ನು ಖಂಡಿಸಿದ್ದವು. ಆದರೆ ಇದೇ ವಿಷಯ ಅಕ್ಟೋಬರ್ 2016ರಲ್ಲಿ ಚರ್ಚೆಗೆ ಬಂದಾಗ ಇಸ್ರೇಲ್ ವಿರುದ್ಧ ಮತ ಹಾಕಲು ಭಾರತ ನಿರಾಕರಿಸಿತ್ತು! ಈ ಎರಡೂ ಸಂದರ್ಭಗಳಲ್ಲಿ ಚರ್ಚಾವಿಷಯದಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದರೂ, ಇಸ್ರೇಲ್ ಕುರಿತಾದ ಭಾರತದ ಧೋರಣೆ ಬದಲಾಗಿತ್ತು! ಇತ್ತೀಚೆಗೆ ಹಿಮಾಚಲ ಪ್ರದೇಶದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿಯವರು ಭಾರತೀಯರ ಸೈನಿಕರ ಶೌರ್ಯ, ಪರಾಕ್ರಮಗಳ ಬಗ್ಗೆ ಪ್ರಸ್ತಾಪಿಸುತ್ತಾ ಸರ್ಜಿಕಲ್ ಸ್ಟ್ರೈಕ್ ಗಳನ್ನು ಈ ಹಿಂದೆ  ಇಸ್ರೇಲ್ ಕಾರ್ಯರೂಪಕ್ಕಿಳಿಸಿತ್ತು ಮತ್ತು ಭಾರತದ ಸೇನೆ ವಿಶ್ವದ ಯಾವುದೇ ಸೇನೆಗೂ ಕಡಿಮೆಯಿಲ್ಲ ಎಂದಿದ್ದರು. ಈ ಸಂದರ್ಭ ಭಾರತದಲ್ಲಿ ಸಾಮಾಜಿಕ ಜಾಲತಾಣಗಳಿಂದ ಮುಖ್ಯವಾಹಿನಿ ಮಾಧ್ಯಮಗಳವರೆಗೂ ಇಸ್ರೇಲ್ ಯುದ್ಧ ನೀತಿ ಮತ್ತು ಸಮರ ತಂತ್ರಗಳ ಬಗ್ಗೆ ಚರ್ಚೆಯಾಗಿತ್ತು.

ಇತ್ತೀಚೆಗೆ ಪಶ್ಚಿಮ ಏಷ್ಯಾದ ವಾತಾವರಣವೂ ಬಹಳಷ್ಟು ಬದಲಾಗಿದ್ದು, ಈ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸೃಷ್ಟಿಸಿದ ಗೊಂದಲಗಳು ಮತ್ತು ಕೋಲಾಹಲಗಳಿಂದಾಗಿ ಇಸ್ರೇಲ್-ಪ್ಯಾಲೆಸ್ಟೀನ್ ವಿವಾದ ಮಸುಕಾಗಿದೆ. ಪಶ್ಚಿಮ ಏಷ್ಯಾದ ರಾಷ್ಟ್ರಗಳು ತಮ್ಮ ಒಳಜಗಳಗಳು ಮತ್ತು ಉಗ್ರರ ವಿಧ್ವಂಸಕ ಕೃತ್ಯಗಳಿಂದಾಗಿ ಭಾರತ-ಇಸ್ರೇಲ್ ಸಂಬಂಧಗಳ ಬಗ್ಗೆ ಯೋಚಿಸುವ ಪರಿಸ್ಥಿತಿಯಲ್ಲಿಲ್ಲ. ಈ ಅಪರೂಪದ ಅವಕಾಶ ಭಾರತ-ಇಸ್ರೇಲ್ ಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಬೆಸೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಅತ್ತ ಪಶ್ಚಿಮ ಏಷ್ಯಾದ ಅರಬ್ ರಾಷ್ಟ್ರಗಳೊಂದಿಗೂ ವಿಶ್ವಾಸ ಉಳಿಸಿಕೊಂಡು ಇಸ್ರೇಲ್ ಮಿತೃತ್ವವನ್ನೂ ಗಟ್ಟಿ ಮಾಡಿಕೊಳ್ಳುವ ರಾಜತಾಂತ್ರಿಕ ಮುತ್ಸದ್ಧಿತನ ಭಾರತದ ವಿದೇಶಾಂಗ ನೀತಿಯ ಸದ್ಯದ ಅವಶ್ಯಕತೆ.

(This article was published in Hosa Digantha newspaper on 8 November 2016)







      KEERTHIRAJ (prof.keerthiraj@gmail.com)
      Professor
International Relations and Political Science
Alliance University, Bangalore.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ